ಕಡಲ ತೀರಕ್ಕೆ ತೇಲಿ ಬಂದ ಅಪರೂಪದ ಸಮುದ್ರ ಜೀವಿ
ಕಾರವಾರ, ಮೇ 20: ಹೆಚ್ಚಿನ ಪ್ರಮಾಣದ ಆಳಸಮುದ್ರವಾಗಿರುವ ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರದಲ್ಲಿ ಕಂಡು ಬರುವ ‘ಪ್ರೊಬಟನ್’ ಎನ್ನುವ ಸಮುದ್ರ ಜೀವಿಗಳು ಕಾರವಾರ ಕಡಲ ತೀರದಲ್ಲಿ ತೇಲಿ ಬಂದಿವೆ ಎಂದು ಸಾಗರ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ.ಯು.ಜಿ ನಾಯ್ಕ ತಿಳಿಸಿದ್ದಾರೆ
ಮೀನುಗಾರರು ಹಾಕಿದ ಬಲೆಗೆ ರಾಶಿ ರಾಶಿ ಸಂಖ್ಯೆಯಲ್ಲಿ ಈ ಜೀವಿಗಳು ಬೀಳುತ್ತಿದ್ದು, ಉಪಯೋಗವಿಲ್ಲದ ಅಪಾಯಕಾರಿ ಈ ಜೀವಿಯನ್ನು ಮೀನುಗಾರರು ಕಡಲ ತೀರಕ್ಕೆ ತಂದು ಹಾಕುತ್ತಿದ್ದಾರೆ. ಮೀನುಗಾರರಿಗೆ ಇದು ತಲೆ ನೋವಾಗಿ ಪರಿಣಮಿಸಿದ್ದು, ಜೆಲ್ಲಿ ಫಿಶ್ (ಲೋಳೆಮೀನು)ಜಾತಿಗೆ ಸೇರಿರುವಂತಹ ಸಮುದ್ರ ಜೀವಿ ಇದಾಗಿದ್ದು, ಸಮುದ್ರದ ಮೇಲ್ಭಾಗದಲ್ಲಿ ತೇಲುತ್ತಿರುತ್ತದೆ. ಗೋಲ್ಡನ್ ಬ್ರೌನ್ ಬಣ್ಣದ ಚಪ್ಪಟೆ ಆಕಾರದ ದೇಹಸ್ಥಿತಿ ಹೊಂದಿದೆ. ಸಮುದ್ರದಲ್ಲಿ ತೇಲಲು ದೇಹದ ಆಕಾರವನ್ನು ಚಪ್ಪಟೆ ಹಾಗೂ ದುಂಡಗೆ ಮಾಡಿ ತೇಲುತ್ತದೆ.
ಸಮಶೀತೋಷ್ಣ ವಲಯದ ಸಮುದ್ರದಲ್ಲಿ ತೇಲುವ ಈ ಜೀವಿ ದೇಶದ ಗೋವಾ ಕಡಲ ತೀರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕಳೆದ ಕೆಲ ವರ್ಷಗಳ ಹಿಂದೆ ಗೋವಾ ಕಡಲ ತೀರದಲ್ಲಿ ಕಂಡು ಬಂದಿದ್ದು, ನಂತರ ಪಶ್ಚಿಮ ಕರಾವಳಿಯಲ್ಲಿ ಕಂಡುಬಂದಿರಲಿಲ್ಲ ಎನ್ನುವುದು ಸಾಗರ ವಿಜ್ಞಾನಿಗಳ ಅನಿಸಿಕೆ. ಆಳ ಸಮುದ್ರದಲ್ಲಿ ಉಂಟಾದ ಪ್ರಕ್ಷುಬ್ಧ ವಾತಾವರಣದಿಂದಾಗಿ ನಗರದ ಕಡಲ ತೀರಕ್ಕೆ ಹೇರಳ ಪ್ರಮಾಣದಲ್ಲಿ ತೇಲಿ ಬಂದಿವೆ ಎನ್ನಲಾಗುತ್ತದೆ. ಈ ಜೀವಿಗೆ ದೇಹದ ಸುತ್ತಲೂ ಇರುವ ಗ್ರಹಣಾಂಗ (ಟೆಂಟಕಾಲ್)ದ ಮೂಲಕ ಸಮುದ್ರದಲ್ಲಿನ ಚಿಕ್ಕ ಪುಟ್ಟ ಜೀವಿಯನ್ನು ಹಿಡಿದು ತಿನ್ನಲು ಸಹಕಾರಿಯಾಗಿದೆ. ಇದಕ್ಕೆ ಇರುವ ಗ್ರಂಥಿಗಳು ಮನುಷ್ಯನಿಗೆ ತಾಗಿದ್ದರೆ ಭಯಂಕರ ರೀತಿಯಲ್ಲಿ ತುರಿಕೆಗೆ ಕಾರಣವಾಗುತ್ತದೆ. ವಿಶೇಷವೆಂದರೆ ಗಂಡು ಹೆಣ್ಣು ಲಿಂಗ ಒಂದೇ ದೇಹದಲ್ಲಿರುತ್ತದೆ.
ಇವು ಆಳ ಸಮುದ್ರದಲ್ಲಿ ಉಂಟಾದ ತುಫಾನಿನಿಂದ ಕಡಲ ತೀರಕ್ಕೆ ಬಂದಿರಬಹುದೆಂದು ಊಹಿಸಲಾಗಿದ್ದು, ಈ ಸಮುದ್ರ ಜೀವಿಯ ಬಗ್ಗೆ ಸಾಗರ ವಿಜ್ಞಾನ ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಸಂಶೋಧನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.