ಸಂಶೋಧನೆಗಳು ರೆತರಿಗೆ ತಲುಪಲಿ: ಸಿದ್ದರಾಮಯ್ಯ
ಬೆಂಗಳೂರು, ಮೇ 20: ಭೂಮಿ ಲವತ್ತತೆ, ಬೆಳೆ ಮಾದರಿ ಬಗ್ಗೆ ರೈತರಿಗೆ ಅರಿವು ಮತ್ತು ಮಾಹಿತಿ ನೀಡಿ ಅವುಗಳನ್ನು ಕಾಲಕಾಲಕ್ಕೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಪರಿಣಾಮಕಾರಿಯಾಗಿ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ನಗರದ ಜಿಕೆವಿಕೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಕ್ಷೇತ್ರ ಕಚೇರಿಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿ ನಿಲಯಗಳ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಯೋಗಾಲಯದಿಂದ ಭೂಮಿವರೆಗೆ ಎಂಬ ಮಾತನ್ನು ನಾನು ಚಿಕ್ಕಂದಿನಿಂದ ಕೇಳುತ್ತಾ ಬಂದಿದ್ದೇನೆ. ಆದರೆ, ಇದು ಸರಿಯಾಗಿ ಆಗುತ್ತಿಲ್ಲ. ಸಂಶೋಧನೆಗಳು ಪ್ರಯೋಗಾಲಯದಲ್ಲಿ ಇದ್ದರೆ ಸಾಲದು, ರೈತರನ್ನು ತಲುಪುವಂತಾಗಬೇಕು. ಈ ಮೂಲಕ ಕೃಷಿ ಲಾಭದಾಯಕ ಕ್ಷೇತ್ರವನ್ನಾಗಿ ಬದಲಾಯಿಸಬೇಕು ಎಂದು ಹೇಳಿದರು.
ಹವಾಮಾನ ಬದಲಾವಣೆಯಿಂದ ಮಳೆ ಕಡಿಮೆಯಾಗಿದೆ. ಮಳೆ ಆಶ್ರಿತ ಬೆಳೆ, ಬೆಲೆ ಸರಿಯಾಗಿ ಸಿಗದೇ ಇರುವುದು, ಇಳುವರಿ ಕುಂಠಿತ ಮತ್ತಿತರ ಕಾರಣಗಳಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜೂನ್‌ನಿಂದ ಆಗಸ್ಟ್‌ವರೆಗೆ ಮಳೆ ಬಂದರೆ ರೈತರಿಗೆ ಅನುಕೂಲ ವಾಗುತ್ತದೆ. ಕಳೆದ ವರ್ಷ ಹಿಂಗಾರು, ಮುಂಗಾರು ಮಳೆ ಸರಿಯಾ ಗಲಿಲ್ಲ. ಹಾಗಾಗಿ 12 ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದಾಗಿ ಬೆಳೆ ನಾಶ ವಾಗಿದೆ. ಮುಂಗಾರು ಕೈ ಕೊಟ್ಟಿದ್ದರಿಂದ 16 ಸಾವಿರ ಕೋಟಿ ಬೆಳೆ ನಷ್ಟ ವಾಗಿದೆ. ಹಿಂಗಾರು ಮಳೆ ಕ್ಷೀಣಿಸಿದ್ದರಿಂದ 7ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಪೂರ್ಣ ಪ್ರಮಾಣದಲ್ಲಿ ರೈತರಿಗೆ ಪರಿಹಾರ ಕೊಡಲು ಸಾಧ್ಯ ವಾಗುತ್ತಿಲ್ಲ. ಪ್ರಕೃತಿ ಮುನಿಸಿಕೊಂಡರೆ ಸರಕಾರ ಅಸಹಾಯಕತೆಗೆ ತಲುಪುತ್ತದೆ ಎಂದರು.
16 ಸಾವಿರ ಕೋಟಿ ಬೆಳೆ ನಷ್ಟದಲ್ಲಿ ಸರಕಾರ ಮೂರೂವರೆ ಸಾವಿರ ಕೋಟಿ ಪರಿಹಾರ ಕೊಡಲು ಸಾಧ್ಯ. ಕೇಂದ್ರ ಸರಕಾರ ಕೇವಲ ಒಂದೂವರೆ ಸಾವಿರ ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಪರಿಹಾರ ಕೊಡುವುದಕ್ಕಿಂತ ಹೆಚ್ಚಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗುವಂತಹ ಸಂಶೋಧನೆಗಳು ಹೆಚ್ಚಾಗಬೇಕು ಎಂದು ಕೃಷಿ ವಿವಿ ವಿಜ್ಞಾನಿಗಳಿಗೆ ಸಲಹೆ ನೀಡಿದರು.
ಹಳ್ಳಿಗಳಲ್ಲಿ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಶೇ. 80 ರಷ್ಟು ಮಂದಿ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಈಗ ಈ ಪ್ರಮಾಣ ಶೇ. 62 ರಷ್ಟಾಗಿದ್ದು, ಇದಕ್ಕೆ ಕಾರಣ ಯುವಕರು ಉದ್ಯೋಗ ಅರಸಿ ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಇತ್ತ ಹಳ್ಳಿಗಳು ವೃದ್ಧಾಶ್ರಮಗಳಾಗಿ ಬದಲಾಗುತ್ತಿವೆ. ನಮ್ಮದು ಕೃಷಿ ಪ್ರಧಾನ ದೇಶವಾದರೂ ಹಣ್ಣು-ತರಕಾರಿಯನ್ನು ನಾವು ಆಮದು ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯುವಕರು ಮತ್ತೆ ಕೃಷಿಯನ್ನು ಅವಲಂಬಿಸಲು ಪೂರಕ ವ್ಯವಸ್ಥೆಗಳನ್ನು ಮತ್ತು ಕೃಷಿಯನ್ನು ಲಾಭದಾಯಕದತ್ತ ಮಾಡಲು ಕೃಷಿ ವಿವಿಗಳು ಮತ್ತು ವಿಜ್ಞಾನಿಗಳು ಮುಂದಾಗಬೇಕು ಎಂದು ಹೇಳಿದ ಅವರು, ರೈತರು ರೂಹಾಗೂ ವಿಶ್ವವಿದ್ಯಾನಿಲಯಗಳ ನಡುವಿನ ಅಂತರವನ್ನು ಕಡಿಮೆಗೊಳಿಸಿ ಕೃಷಿ, ತೋಟಗಾರಿಕೆ ಮತ್ತು ಪಶು ವಿಶ್ವವಿದ್ಯಾನಿಲಯಗಳು ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣಭೈರೇಗೌಡ, ಶಾಸಕರಾದ ಬಸವರಾಜಹೊರಟ್ಟಿ, ಆರ್.ವಿ.ವೆಂಕಟೇಶ್ ಎಚ್.ವೈ.ಮೇಟಿ, ಜೆ.ಟಿ. ಪಾಟೀಲ್, ಎಂ. ನಾರಾಯಣಸ್ವಾಮಿ, ಕುಲಪತಿ ಡಾ. ಮಹೇಶ್ವರ್,ಕೃಷಿ ವಿವಿ ಕುಲಪತಿ ಡಾ. ಎಚ್. ಶಿವಣ್ಣ, ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಡಿ.ಎಲ್. ಮಹೇಶ್ವರ್ ಮತ್ತಿತರರು ಉಪಸ್ಥಿತರಿದರು.
16 ಸಾವಿರ ಕೋಟಿ ರೂ. ಬೆಳೆ ನಷ್ಟದಲ್ಲಿ ಸರಕಾರ ಮೂರೂವರೆ ಸಾವಿರ ಕೋಟಿ ಪರಿಹಾರ ಕೊಡಲು ಸಾಧ್ಯ. ಕೇಂದ್ರ ಸರಕಾರ ಕೇವಲ ಒಂದೂವರೆ ಸಾವಿರ ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಪರಿಹಾರ ಕೊಡುವುದಕ್ಕಿಂತ ಹೆಚ್ಚಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿ ರೈತರಿಗೆ ನೆರವಾಗುವಂತಹ ಸಂಶೋಧನೆಗಳು ಹೆಚ್ಚಾಗಬೇಕು
- ಸಿದ್ದರಾಮಯ್ಯ, ಮುಖ್ಯಮಂತ್ರಿ