ಸಚಿವ ಜಾರಕಿಹೊಳಿಯಿಂದ ಅಧಿಕಾರ ದುರುಪಯೋಗ ಶಂಕರ ಮುನವಳ್ಳಿ ಆರೋಪ
ಬೆಂಗಳೂರು, ಮೇ 20: ಬೆಳಗಾವಿ ನಗರದಲ್ಲಿರುವ ಕುಲಕರ್ಣಿ ಕುಟುಂಬಕ್ಕೆ ಸೇರಿರುವ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಿಕ್ಕಾಗಿ ಜಿಲ್ಲಾ ಉಸ್ತು ವಾರಿ ಸಚಿವ ಸತೀಶ ಜಾರಕಿಹೊಳಿ ತಮ್ಮ ಅಧಿಕಾರದ ಮೂಲಕ ಜಿಲ್ಲಾಡಳಿತವನ್ನು ದುರುಪ ಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಆರೋಪಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮಧ್ಯಭಾಗದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕುಲಕರ್ಣಿಯವರಿಗೆ ಸೇರಿದ ಸುಮಾರು 20.3 ಎಕರೆ ಜಮೀನು ಇದೆ. ಇದರ ಮಧ್ಯ ಭಾಗದಲ್ಲಿ ಒಂದು ಚರ್ಚ್ ನಿರ್ಮಿಸಲಾಗಿದೆ. ಇದಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸ್ಥಳೀಯ ಶಾಸಕ ಪಿರೋಜ್‌ಸೇಠ್‌ರನ್ನು ಬಳಸಿಕೊಂಡು ಸಚಿವ ಜಾರಕಿಹೊಳಿ ಸ್ಥಳೀಯ ಆಡಳಿತವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಅಲ್ಲದೇ, ಕುಲಕರ್ಣಿ ಕುಟುಂಬಕ್ಕೆ ನಿರಂತರ ಕಿರುಕುಳ ವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಕುಲಕರ್ಣಿ ಮತ್ತು ಅವರ ಕುಟುಂಬದವರು ಕಿರುಕುಳವನ್ನು ತಾಳಲಾರದೆ ಕೋರ್ಟ್ ನಲ್ಲಿ ದಾವೆ ಹೂಡಿರುತ್ತಾರೆ. ನಂತರ ಕೋರ್ಟ್‌ನಿಂದಲೂ ಕುಲಕರ್ಣಿಯವರಿಗೆ ಸೇರಿದ ಆಸ್ತಿಯೆಂದು ಮಾನ್ಯತೆ ಸಿಕ್ಕಿತ್ತು. ಆದರೂ ಅಧಿಕಾರಿಗಳು ಮತ್ತು ಪೊಲೀಸರು ಮತ್ತೆ ಕಿರುಕುಳವನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿಂದು ಕಾನೂನು ವ್ಯವಸ್ಥೆ ಹದಗೆಡುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಶಾಸಕರು, ಮಂತ್ರಿಗಳು ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ನಾನು ಸಮಾನ ಆಡಳಿತ ನಡೆಸುತ್ತೇನೆ ಎಂದು ಹೇಳಿದ್ದರು. ಆದರೆ, ಈಗ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಾ, ಜನರ ಮೇಲೆ ಅಧಿಕಾರ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಇವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ನೀಡಲಾಗಿದೆ. ಅವರು ಮುಂದಿನ 10 ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುವುದರ ಮೂಲಕ ಸಿಬಿಐ ಗೆ ತನಿಖೆಗೆ ಆದೇಶ ಮಾಡುವಂತೆ ಕೋರಲಾಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರಕಾರದಲ್ಲಿ ಶಾಸಕ ಮತ್ತು ಮಂತ್ರಿಗಳ ಮಾತಿಗೆ ಮಣಿದು ಕಾರ್ಯಕರ್ತರನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸರಕಾರ ಉಳಿಯುವುದು ಕಷ್ಟವಾಗುತ್ತದೆ ಎಂದರು.