×
Ad

ರಾಜ್ಯಪಾಲರಿಗೆ ಸ್ಪಷ್ಟನೆ ನೀಡಿದ ಸಚಿವ ಎಚ್.ಕೆ.ಪಾಟೀಲ್

Update: 2016-05-20 23:42 IST

ಬೆಂಗಳೂರು, ಮೇ 20: ಗ್ರಾಮೀಣ ವಿಶ್ವ ವಿದ್ಯಾನಿಲಯ ಸ್ಥಾಪನೆ ಸಂಬಂಧದ ಸುಗ್ರೀವಾಜ್ಞೆಗೆ ಅಂಕಿತ ಹಾಕದೆ ಮಸೂದೆಯನ್ನು ರಾಜ್ಯಪಾಲರು ಸರಕಾರಕ್ಕೆ ವಾಪಸ್ ಕಳುಹಿಸಿದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲರು, ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಖುದ್ದು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಶುಕ್ರವಾರ ಬೆಳಗ್ಗೆ ರಾಜಭವನಕ್ಕೆ ಆಗಮಿಸಿದ ಎಚ್.ಕೆ.ಪಾಟೀಲರು ಸುಮಾರು 30 ನಿಮಿಷಗಳ ಕಾಲ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿ, ಗ್ರಾಮೀಣ ವಿಶ್ವ ವಿದ್ಯಾನಿಲಯ ಸ್ಥಾಪನೆಯ ಹಿಂದಿನ ಉದ್ದೇಶ ಹಾಗೂ ವಿವಿ ಅಗತ್ಯತೆ ಏನೆಂಬುದರ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಗ್ರಾಮೀಣ ಪ್ರದೇಶಕ್ಕೆ ಮೂಲಸೌಕರ್ಯ ಕಲ್ಪಿಸುವುದು ಹಾಗೂ ನಶಿಸಿ ಹೋಗುತ್ತಿರುವ ಗ್ರಾಮ್ಯ ಸೊಗಡನ್ನು ಉಳಿಸಿ-ಬೆಳೆಸುವ ದೃಷ್ಟಿಯಿಂದ ದೇಶದಲ್ಲೆ ಮೊಟ್ಟ ಮೊದಲಬಾರಿಗೆ ಗ್ರಾಮೀಣ ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಆ ಹಿನ್ನೆಲೆಯಲ್ಲಿ ಗ್ರಾಮೀಣ ವಿವಿ ಸುಗ್ರೀವಾಜ್ಞೆಗೆ ಅಂಕಿತ ಹಾಕಬೇಕು ಎಂದು ಪಾಟೀಲರು, ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಅಂಕಿತ ಹಾಕುವ ವಿಶ್ವಾಸ: ಗ್ರಾಮೀಣ ವಿಶ್ವ ವಿದ್ಯಾಲಯ ಸ್ಥಾಪನೆ ಸಂಬಂಧದ ಸುಗ್ರೀವಾಜ್ಞೆಯ ಬಗ್ಗೆ ರಾಜ್ಯಪಾಲರು ಕೆಲ ಸ್ಪಷ್ಟನೆ ಕೋರಿದ್ದು, ವಿವಿ ಸ್ಥಾಪನೆಯ ಹಿಂದಿನ ಉದ್ದೇಶ ಹಾಗೂ ಕಾಯ್ದೆ ಜಾರಿಗೆ ತಂದಿರುವ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದೇನೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ರಾಜ್ಯಪಾಲರ ಭೇಟಿ ಬಳಿಕ ರಾಜಭವನದ ಮುಂದೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಗ್ರಾಮೀಣ ವಿವಿ ಸುಗ್ರೀವಾಜ್ಞೆಗೆ ಅಂಕಿತ ಹಾಕಿದರೆ ಅದರ ಶೀಘ್ರ ಜಾರಿ ಮಾಡಲು ಅನುಕೂಲ ಆಗಲಿದೆ. ಸುಗ್ರೀವಾಜ್ಞೆಗೆ ರಾಜ್ಯಪಾಲರು ಶೀಘ್ರದಲ್ಲೆ ಅಂಕಿತ ಹಾಕುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News