ನೆಮ್ಮದಿಯ ನಿರೀಕ್ಷೆಯಲ್ಲೂ ಆತಂಕದ ಛಾಯೆ!
ಕೋಕ್ ಸಲ್ಫರ್ ಘಟಕದಿಂದ ಜೋಕಟ್ಟೆಯ ಅರಿಕೆರೆ, ಕಡೆಮನೆ, ಕೆಬಿಎಸ್ ಮಾರುಕಟ್ಟೆ, ನಿರ್ಮುಂಜೆ ಪ್ರದೇಶಗಳ ಜನರ ಸಮಸ್ಯೆಗಳ ಕುರಿತಂತೆ ವಾರ್ತಾಭಾರತಿ ಪತ್ರಿಕೆ 2014ರ ಅಕ್ಟೋಬರ್ 7ರಿಂದ ಮೂರು ದಿನಗಳ ಕಾಲ ಸರಣಿ ಲೇಖನಗಳ ಗಮನ ಸೆಳೆದಿತ್ತು. ಬಳಿಕ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಹೋರಾಟದ ಸುದ್ದಿಗಳ ಮೂಲಕವೂ ಪತ್ರಿಕೆ ಸ್ಥಳೀಯರ ಹೋರಾಟಕ್ಕೆ ಪ್ರತಿಸ್ಪಂದಿಸಿದ್ದು, ಇದೀಗ ಹೋರಾಟಕ್ಕೆ ಸಿಕ್ಕಿರುವ ಯಶಸ್ಸಿನ ಜತೆಗೆ ಅವರ ಆತಂಕದಲ್ಲೂ ಸಾಥ್ ನೀಡುತ್ತಿದೆ.
- ಸತ್ಯಾ ಕೆ.
ಒಂದೆಡೆ ಕೃಷಿ ಬದುಕು ದೂರವಾಯಿತು. ಮತ್ತೊಂದೆಡೆ ದೊಡ್ಡ ಕಂಪೆನಿಯಲ್ಲಿ ಉದ್ಯೋಗ ದೊರೆಯುವುದೆಂಬ ಕನಸು ನುಚ್ಚು ನೂರಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಭೂಮಿ ಕಳೆದುಕೊಳ್ಳುತ್ತ ನೆಮ್ಮದಿಯೆಂಬುದು ಮರೀಚಿಕೆ ಆಗಿಬಿಟ್ಟಿದೆ. ಇವೆಲ್ಲದರ ನಡುವೆ, ಆತಂಕದ ಕರಿಛಾಯೆ ಮಾತ್ರ ಇವರ ಬೆನ್ನು ಬಿಡುತ್ತಿಲ್ಲ.
ಇದು ನಗರದ ಜೋಕಟ್ಟೆ, ಪೆರ್ಮುದೆ, ಕಳವಾರು ಸೇರಿದಂತೆ ಎಂಆರ್‌ಪಿಎಲ್ ಹಾಗೂ ಎಂಎಸ್‌ಇಝೆಡ್‌ಗಾಗಿ ಭೂಮಿ ಕಳೆದುಕೊಂಡವರ, ಕಳೆದುಕೊಳ್ಳಲಿರುವ ಜನರ ವಾಸ್ತವ ಚಿತ್ರಣ. ಭೂಮಿ ಕಳೆದುಕೊಂಡು ನಿರ್ವಸಿತರಾಗಿ ಸರಕಾರದಿಂದ ಪರಿಹಾರ ಪಡೆದುಕೊಂಡು ಸರಕಾರ ನೀಡಿರುವ ಜಾಗದಲ್ಲಿ ಬದುಕು ಕಟ್ಟಿಕೊಂಡಿರುವವರ ಸ್ಥಿತಿ ಒಂದು ರೀತಿಯಾದರೆ, ಕಂಪೆನಿಗಳ ಸುತ್ತ ಮುತ್ತ ಕೂಗಳತೆಯ ದೂರದಲ್ಲಿರುವ ನಿರ್ವಸಿತರಾಗುವ ಭೀತಿಯನ್ನು ಎದುರು ನೋಡುತ್ತಿರುವವರ ಸ್ಥಿತಿ ಮತ್ತೊಂದು ತೆರನದ್ದು. ಅಭಿವೃದ್ದಿಗಾಗಿ ಕಳೆದ ಎರಡು ಮೂರು ದಶಕಗಳಿಂದ ಭೂಮಿ ಕಳೆದುಕೊಂಡು, ಬದುಕಿಗಾಗಿ, ತಮ್ಮ ನೆಲೆಗಾಗಿ ಹೋರಾಟವನ್ನೇ ಉಸಿರಾ ಗಿಸಿಕೊಂಡು ನೆಮ್ಮದಿಯ ನಿರೀಕ್ಷೆಯ ನಡುವೆಯೂ ಆತಂಕದ ಭೀತಿಯನ್ನೇ ಎದುರಿಸುವ ಪರಿಸ್ಥಿತಿ ಈ ಸಂತ್ರಸ್ತರದ್ದು. ಇದಕ್ಕೊಂದು ಸ್ಪಷ್ಟ ನಿದರ್ಶನ ಎಂಆರ್‌ಪಿಎಲ್‌ನ ವಿಸ್ತರಣಾ ಹಂತದ ಸಲ್ಫರ್ ಮತ್ತು ಕೋಕ್ ಘಟಕಗಳ ಸಮೀಪದ ಜೋಕಟ್ಟೆ ನಿವಾಸಿಗಳು.
ಕೋಕ್ ಸಲ್ಫರ್ ಘಟಕದಿಂದ ಕೂಗಳತೆಯ ದೂರದಲ್ಲಿರುವ ಅಂಗಡಿಗುಡ್ಡ, ಅರಿಕೆರೆ, ನಿರ್ಮುಂಜೆ ಮೊದಲಾದ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಕಳೆದ ಸುಮಾರು ಎರಡು ವರ್ಷಗಳಿಂದ ಕೋಕ್ ಸಲ್ಫರ್ ಘಟಕದಿಂದ ವಾಯುಮಾಲಿನ್ಯ, ಶಬ್ದ ಮಾಲಿನ್ಯದ ಜತೆಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದವರು. ಕಳೆದ ಸುಮಾರು ಒಂದೂವರೆ ವರ್ಷದಿಂದ ನಾನಾ ರೀತಿಯ ಹೋರಾಟಗಳನ್ನು ನಡೆಸುತ್ತಾ ಬಂದಿದ್ದು, ಕೊನೆಗೂ ಸರಕಾರ ಮನಸ್ಸು ಮಾಡಿ ಕಂಪನಿಯ ಹಸಿರು ನಿರ್ಮಾಣ ವಲಯಕ್ಕಾಗಿ ಪೀಡಿತರಾಗಿರುವ ಕುಟುಂಬಗಳ ಭೂಸ್ವಾಧೀನಕ್ಕೆ ಮುಂದಾಗಿದೆ.
ಇದರಿಂದ ಸದ್ಯದಲ್ಲೇ ನೆಮ್ಮದಿಯ ಬದುಕನ್ನು ಎದುರು ನೋಡುತ್ತಿರುವ, ಹೋರಾಟಕ್ಕೆ ಫಲ ದೊರಕಿದ ಬಗ್ಗೆ ಸಂತಸ ಪಡುವ ಜತೆಯಲ್ಲೇ ಪರಿಹಾರದ ಹೆಸರಿನಲ್ಲಿ ದೊರೆಯುವ ಭೂಮಿಯಲ್ಲಿ ತಾವು ಮತ್ತೆ ಹಸನಾದ ಬದುಕು ಕಟ್ಟಿಕೊಳ್ಳಬಹುದೇ ಎಂಬ ಆಂತಕದೊಂದಿಗೇ ಭವಿಷ್ಯದ ದಿನಗಳನ್ನು ಎದುರು ನೋಡುತ್ತಿದ್ದಾರೆ. ಆತಂಕದಲ್ಲಿ ಸರಿಯಾಗಿ ನಿದ್ದೆಯೇ ಇಲ್ಲ!
‘‘11 ಸೆಂಟ್ಸ್ ಜಾಗದಲ್ಲಿ ಸುಮಾರು 18 ವರ್ಷಗಳಿಂದ ಮಕ್ಕಳೊಂದಿಗೆ ವಾಸಿಸುತ್ತಿದ್ದೇನೆ. ಮನೆಗೆ ತಾಗಿಕೊಂಡೇ ಇಲ್ಲಿ ಕಾರ್ಖಾನೆಗಳು ತಲೆ ಎತ್ತುತ್ತವೆ ಎಂಬ ಕಲ್ಪನೆಯೇ ನಮಗಿರಲಿಲ್ಲ. ಹಾಗಾಗಿ ಇಬ್ಬರು ಮಕ್ಕಳಿಗೆ ಸೇರಿ ಮೂರು ಮನೆ ಪ್ರತ್ಯೇಕವಾಗಿ ಸಾಕಷ್ಟು ಖರ್ಚು ಮಾಡಿ ನಿರ್ಮಿಸಲಾಗಿದೆ. ಕೆಲ ವರ್ಷಗಳ ಹಿಂದೆ ನಮ್ಮ ಪಕ್ಕದ ಜಾಗ ಸ್ವಾಧೀನಗೊಳ್ಳುವಾಗಲೂ ನಮ್ಮ ಬಗ್ಗೆ ಕಂಪೆನಿಯವರು ಯಾವುದೇ ಗಮನ ನೀಡದ ಕಾರಣ, ಕಳೆದೆರಡು ವರ್ಷಗಳಿಂದ ನಾವು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಯಿತು.
ಆರೋಗ್ಯದಲ್ಲಿ ತೊಂದರೆ, ಕರ್ಕಶ ಶಬ್ದ, ಊರು ಬಿಟ್ಟು ಓಡಿ ಹೋಗುವಂತಹ ಸ್ಥಿತಿ ನಮ್ಮದಾಗಿತ್ತು. ಆದರೆ ಓಡಿ ಹೋಗುವುದಾದರೂ ಎಲ್ಲಿಗೆ? ಇದ್ದ ಒಂದು ನೆಲೆಯನ್ನು ಬಿಟ್ಟು. ಹಾಗಾಗಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಯಿತು. ಇದೀಗ ನಮ್ಮ ಭೂಮಿಯನ್ನು ಸ್ವಾಧೀನ ಪಡಿಸಿ ಪರಿಹಾರ ನೀಡುತ್ತಾರೆಂಬ ಭರವಸೆ ದೊರಕಿದೆ. ಆದರೆ ಪರ್ಯಾಯ ವ್ಯವಸ್ಥೆಯಡಿ ಸಿಗುವ ಭೂಮಿಯಲ್ಲಿ ಇಲ್ಲಿ ಬಾವಿಗಳಲ್ಲಿ ಲಭ್ಯವಿರುವಂತೆ ನೀರು ಸಿಗುವುದೇ? ಪರಿಸರ ಚೆನ್ನಾಗಿರಬಹುದೇ? ಎಂಬೆಲ್ಲ ಪ್ರಶ್ನೆ, ಆತಂಕದಲ್ಲಿ ನಿದ್ದೆಯೇ ಬರುತ್ತಿಲ್ಲ ಎನ್ನುತ್ತಾರೆ ನಿರ್ಮುಂಜೆಯ ಶೇಖರ್ ಅಂಚನ್.
ಜತ್ತಬೆಟ್ಟುವಿನಲ್ಲಿ ವಾಸವಿದ್ದ ಸೇಸಮ್ಮ ಎಂಟು ವರ್ಷಗಳ ಹಿಂದೆ ತಮ್ಮ ಭೂಮಿಯನ್ನು ಕಳೆದುಕೊಂಡು ಪ್ರಸ್ತುತ ನಿರ್ಮುಂಜೆಯಲ್ಲಿ ವಾಸವಾಗಿದ್ದಾರೆ. ಇವರು ಭೂಮಿ ಮನೆ ಕಳೆದುಕೊಂಡ ಹಿನ್ನೆಲೆಯಲ್ಲಿ ಪ್ಯಾಕೇಜ್‌ನಡಿ ಮನೆಗೊಂದು ಉದ್ಯೋಗ ಸಿಗಬೇಕಾಗಿತ್ತು. ಅದರಂತೆ ಇಳಿ ವಯಸ್ಸಿನ ಸೇಸಮ್ಮರ ಮೊಮ್ಮಗನಿಗೆ ಎಸ್‌ಇಝೆಡ್ ವಲಯದ ಜೆಬಿಎಫ್‌ನಲ್ಲಿ ಉದ್ಯೋಗ ದೊರಕಿದ್ದರೂ ಇದೀಗ ಅಲ್ಲಿ ಸೂಕ್ತವಾದ ವೇತನ ದೊರೆಯದ ಹಿನ್ನೆಲೆಯಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಅತ್ತ ಭೂಮಿಯೂ ಇಲ್ಲ. ಇತ್ತ ಉದ್ಯೋಗವೂ ಇಲ್ಲದೆ ಸೇಸಮ್ಮರ ಕುಟುಂಬ ನಿರ್ಮುಂಜೆಯ ಐದು ಸೆಂಟ್ಸ್ ಜಾಗದಲ್ಲಿ ಸದ್ಯ ವಾಸಿಸುತ್ತಿದ್ದು, ಸೇಸಮ್ಮ ಕೋಕ್ ಸಲ್ಫರ್ ಘಟಕದಿಂದ ಹೊರಹೊಮ್ಮುತ್ತಿದ್ದ ಕೋಕ್ ಪುಡಿಯಿಂದ ಈಗಲೂ ಅಸೌಖ್ಯದಿಂದಿದ್ದಾರೆ. ‘‘ಪ್ರಥಮ ಹಂತದ ಎಂಆರ್‌ಪಿಎಲ್‌ಗಾಗಿ ನಾವು ಭೂಮಿ ಕಳೆದುಕೊಂಡು ಕೋಡಿಕೆರೆಯಲ್ಲಿ ನೀಡಲಾದ ಪರ್ಯಾಯ ಭೂಮಿಯಲ್ಲಿ ವ್ಯವಸ್ಥೆ ಸರಿ ಇಲ್ಲ ಎಂಬ ಕಾರಣಕ್ಕೆ ನಿರ್ಮುಂಜೆಯಲ್ಲಿ ಜಾಗ ಖರೀದಿಸಿ ವಾಸಿಸುತ್ತಿದ್ದೇವೆ.
ಆದರೆ, ನಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಮತ್ತೆ ಮನೆ ಕಳೆದುಕೊಂಡು ನೀರಿಲ್ಲದ ಜಾಗಕ್ಕೆ ನಮ್ಮನ್ನು ಹಾಕುತ್ತಾರೆಯೋ ಎಂಬ ನೋವು ನಮ್ಮನ್ನು ಕಾಡುತ್ತಿದೆ. ಇಲ್ಲಿ ನಮಗೆ ಬಸ್ಸು ಸೌಕರ್ಯವಾಗಲಿ, ಪರಿಸರದ ಸಮಸ್ಯೆಯಾಗಲಿ ಏನೂ ಇರಲಿಲ್ಲ. ಆದರೆ ಕಳೆದೆರಡು ವರ್ಷಗಳಿಂದ ಕೋಕ್ ಸಲ್ಫರ್ ಘಟಕ ಕಾರ್ಯಾಚರಣೆ ಆರಂಭಿಸಿದ ಬಳಿಕವಷ್ಟೇ ಇಲ್ಲಿ ಪರಿಸರ ಮಾಲಿನ್ಯ ಸಮಸ್ಯೆಯಾಗಿದೆ. ಬಾವಿಗಳ ಮೇಲ್ಭಾಗವನ್ನು ಸಂಪೂರ್ಣ ಮುಚ್ಚಿ ನೀರನ್ನು ಕುಡಿಯಬೇಕಾದ ಪರಿಸ್ಥಿತಿ ಇದೆ. ಅದು ಬಿಟ್ಟು ಇಲ್ಲಿ ಶಾಲೆ, ಚರ್ಚ್, ಮಸೀದಿ, ದೇವಸ್ಥಾನಗಳ ಜತೆಗೆ ಸೌಹಾರ್ದ ಜೀವನವನ್ನು ನಾವಿಲ್ಲಿ ನಡೆಸುತ್ತಿದ್ದೇವೆ. ಇನ್ನು ಪರಿಹಾರವಾಗಿ ಸಿಗುವ ಜಾಗದಲ್ಲಿ ಇಂತಹ ಜೀವನ ಸಿಗುವುದೇ?’’ ಎಂದು ಪ್ರಶ್ನಿಸುತ್ತಾರೆ ಸೇಸಮ್ಮರ ಸೊಸೆ.