15 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ
ಶಿವಮೊಗ್ಗ, ಮೇ 21: ಇತ್ತೀಚೆಗೆ ಬಂದ ಬಿರುಗಾಳಿ ಮಳೆಯ ವೇಳೆ ಶಿವಮೊಗ್ಗ ತಾಲೂಕಿನ ಚೋರಡಿ ಹಾಗೂ ತುಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೂರಾರು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಪರಿಣಾಮ ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ)ಗಳು ಹಾಳಾಗಿದ್ದು, ಇದರಿಂದ ಸರಿಸುಮಾರು 15 ಹಳ್ಳಿಗಳಲ್ಲಿ ವಿದ್ಯುತ್ ಪೂರೈಕೆ ಇಲ್ಲವಾಗಿದೆ. ಇದು ಕುಡಿಯುವ ನೀರು ಪೂರೈಕೆ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿದೆ. ಚೋರಡಿ, ಮರಾಠಿ ಕ್ಯಾಂಪ್, ಒಡೆಯರಕೊಪ್ಪ, ಗುಂಡೂರು, ತುಪ್ಪೂರು, ಕೋಣೆಹೊಸೂರು, ಚೋಡನಾಳು, ಬ್ಯಾಡನಾಳು, ಕೋಟೆಹಾಳ, ಶಾಂತಿನಗರ, ಹೆಗ್ಗೆರೆ, ಹೊರಬೈಲು, ಸನ್ನಿವಾಸ, ಜಿರಗದಹಳ್ಳಿ, ಕಾನ್‌ಕೇರಿ ಮೊದಲಾದ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಪೂರೈಕೆಯಿಲ್ಲದಿರುವುದರಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಮತ್ತೊಂದೆಡೆ ತೀವ್ರ ಸಮಸ್ಯೆಯಿರುವ ಗ್ರಾಮಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದೆ. ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್, ಶನಿವಾರ ಹಲವು ಗ್ರಾಮಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸಿದರು. ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಇತ್ತೀಚೆಗೆ ಬಂದ ಬಿರುಗಾಳಿ ಮಳೆಯಿಂದ ಚೋರಡಿ ಹಾಗೂ ತುಪ್ಪೂರು ಗ್ರಾಪಂ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ನೂರಕ್ಕೂ ಅಧಿಕ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. ಇದರಿಂದ ಕುಡಿಯುವ ನೀರು ಪೂರೈಕೆಯಲ್ಲಿ ತೀವ್ರ ಸ್ವರೂಪದ ವ್ಯತ್ಯಯ ಉಂಟಾಗಿದೆ ಎಂದರು.
ಸಮಸ್ಯೆಯಿರುವ ಗ್ರಾಮಗಳಿಗೆ ಇಲಾಖೆಯವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮೆಸ್ಕಾಂನವರು ವಿದ್ಯುತ್ ಕಂಬ ಹಾಗೂ ವಿದ್ಯುತ್ ಪರಿವರ್ತಕಗಳ ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸುತ್ತಿದ್ದಾರೆ. ವಿದ್ಯುತ್ ಪೂರೈಕೆ ಆರಂಭವಾದರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಧರಾಶಾಯಿ:
ಮೆಸ್ಕಾಂ ಮೂಲಗಳು ಹೇಳುವ ಪ್ರಕಾರ ಮೇಲ್ಕಂಡ ಗ್ರಾಮಗಳ ವಿವಿಧ ಭಾಗಗಳಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿವೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ತಿಳಿಸುತ್ತವೆ. ಘಟನೆ ನಡೆದ ದಿನದಿಂದಲೂ ಮೆಸ್ಕಾಂ ಸಿಬ್ಬಂದಿ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ನಾಲ್ಕು ತಂಡಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಇಷ್ಟರಲ್ಲಿಯೇ ಎಲ್ಲ ಸಮಸ್ಯೆ ಪರಿಹಾರವಾಗಲಿದೆ ಎಂದು ಮೆಸ್ಕಾಂನ ಕುಂಸಿ ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ನಾಯ್ಕಾ ಶನಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದರು. ಶಿವಮೊಗ್ಗ ತಾಲೂಕಿನ ಚೋರಡಿ, ತುಪ್ಪೂರು ಗ್ರಾಪಂ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಕುಡಿಯುವ ನೀರು ಸರಬರಾಜಿನಲ್ಲಿ ಸಮಸ್ಯೆ ಕಂಡುಬಂದಿದೆ. ಇಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. -ಎಸ್.ಎಂ.ಹರೀಶ್, ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ. ಇತ್ತೀಚೆಗೆ ಬಂದ ಬಿರುಗಾಳಿ ಸಹಿತ ಧಾರಾಕಾರ ಮಳೆಯಿಂದ ತಮ್ಮ ಉಪ ವಿಭಾಗ ವ್ಯಾಪ್ತಿಯ ಸುಮಾರು 15 ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದು ಹಾಗೂ ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. ಸಮಸ್ಯೆ ಪರಿಹಾರಕ್ಕೆ ನಾಲ್ಕು ತಂಡಗಳ ರಚನೆ ಮಾಡಲಾಗಿದೆ. ಈಗಾಗಲೇ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಕಾಲಮಿತಿಯಲ್ಲಿ ಎಲ್ಲ ಗ್ರಾಮಗಳಿಗೂ ವಿದ್ಯುತ್ ಪೂರೈಕೆ ಮಾಡಲಾಗುವುದು.
-ಮಂಜುನಾಥ್ ನಾಯ್ಕ, ಕಾರ್ಯಪಾಲಕ ಅಭಿಯಂತರರು ಕುಂಸಿ ಗ್ರಾಮಾಂತರ ಉಪ ವಿಭಾಗದ ಸಹಾಯಕ.