ಎಲ್ಲ ಅಸಂಘಟಿತ ಕಾರ್ಮಿಕರು ಸಂಘಟಿತರಾಗಲಿ
ಕಡೂರು, ಮೇ 21: ಅಸಂಘಟಿತ ಕಾರ್ಮಿಕರೆಲ್ಲರೂ ಸಂಘಟಿತರಾಗಬೇಕು. ಆಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಪ್ರತಿಯೊಬ್ಬರಿಗೂ ಕಾನೂನು ಸಮನಾಗಿದೆ ಎಂದು ಕಡೂರಿನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರೂ ಆದ ರುಡಾಲ್ಫ್ ಪಿರೇರಾ ತಿಳಿಸಿದ್ದಾರೆ.
ಅವರು, ವಕೀಲರ ಸಂಘ ಕಡೂರು, ಕಡೂರು ತಾಲೂಕು ಕಾರ್ಮಿಕ ಇಲಾಖೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಮಿಕರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರಿಗೆ ಇರುವ ಕಾನೂನುಗಳನ್ನು ಕಾರ್ಮಿಕರು ತಿಳಿದುಕೊಂಡಾಗ ಮಾತ್ರ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಡೂರು ತಾಲೂಕು ಕಾನೂನು ಸೇವಾ ಸಮಿತಿ, ಕಾರ್ಯದರ್ಶಿಗಳಾದ ಪ್ರಧಾನ ಸಿವಿಲ್ ನ್ಯಾಯಾಧೀಶ ವಿಜಯಕುಮಾರ್ ಅಧ್ಯಕ್ಷತೆ ವಹಿಸಿ, ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ ಕುರಿತಾಗಿ ಸೂಕ್ತ ಮಾಹಿತಿ ನೀಡಿದರು. ಜಿಲ್ಲಾ ಕಾರ್ಮಿಕ ಸಹಾಯಕ ಅಧಿಕಾರಿ ಯತಿರಾಜ್ ಕಾರ್ಮಿಕ ಇಲಾಖೆಯಿಂದ ಜಾರಿಗೆ ಬಂದಿರುವ ಸೌಲಭ್ಯಗಳ ಬಗ್ಗೆ ಮಾತನಾಡಿದರು.
ಕಾರ್ಮಿಕರಿಗೆ ಸರಕಾರದಿಂದ ಲಭ್ಯವಿರುವ ಸೌಲಭ್ಯಗಳು ಕಾರ್ಮಿಕರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಹಿರಿಯ ವಕೀಲ ಕೆ.ಎನ್. ಬೊಮ್ಮಣ್ಣ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಸೂರಿ ಶ್ರೀನಿವಾಸ್, ಸಹಾಯಕ ಸರಕಾರಿ ಅಭಿಯೋಜಕ ಹರೀಶ್‌ಕುಮಾರ್ ಕಡೂರು, ತಾಲೂಕು ಕಾರ್ಮಿಕ ಅಧಿಕಾರಿ ಶಶಿಕಲಾ ಕಾರ್ಮಿಕರ ಬಗ್ಗೆ ತಿಳುವಳಿಕೆ ನೀಡಿದರು.
ಸಮಾರಂಭದಲ್ಲಿ ಕಾವ್ಯಾ ಶೃತಿ ಪ್ರಾರ್ಥಿಸಿದರು. ಕಾರ್ಮಿಕ ಇಲಾಖೆ ಅಧಿಕಾರಿ ಗಾಯತ್ರಿ ಸ್ವಾಗತಿಸಿದರೆ, ರುದ್ರೇಶ್ ವಂದಿಸಿದರು.