ರಾಜಾಸೀಟು ಉದ್ಯಾನವನ ಅಭಿವೃದ್ಧಿ ಕುರಿತು ಚರ್ಚೆ
ಮಡಿಕೇರಿ,ಮೇ 21: ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರು, ನಗರದ ಪ್ರವಾಸಿ ತಾಣ ರಾಜಾಸೀಟಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ರಾಜಸೀಟು ಅಭಿವೃದ್ಧಿ ಯೋಜನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಹಾಲಿ ಇರುವ ರಾಜಾಸೀಟು ಉದ್ಯಾನವನವನ್ನು ಮೇಲ್ದರ್ಜೆಗೇರಿಸುವುದು, ರಾಜಾಸೀಟು ಬಳಿ ಇರುವ 5 ಎಕರೆ ಪ್ರದೇಶದಲ್ಲಿ ಪರಿಸರಕ್ಕೆ ಪೂರಕವಾದ ಯೋಜನಾ ಕಾಮಗಾರಿಗಳನ್ನು ಕೈಗೊಳ್ಳುವುದು, ಹಾಲಿ ಇರುವ ಪುಟಾಣಿ ರೈಲನ್ನು ನವೀಕರಿಸುವುದು, ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿಯನ್ನು ಒಳಗೊಂಡ ಮಾಹಿತಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದು, ನೆಹರೂ ಮಂಟಪ ಉದ್ಯಾನವನ ಅಭಿವೃದ್ಧಿ ಪಡಿಸುವುದು ಸೇರಿದಂತೆ ಹಲವು ಮಾಹಿತಿಯನ್ನು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಸುಧೀಂದ್ರ ಕುಮಾರ್ ಅವರು ನೀಡಿದರು. ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಸಚಿನ್, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಸಿ.ಜಗನ್ನಾಥ್, ಭೂಸೇನಾ ನಿಗಮದ ಇಂಜಿನಿಯರ್ ಪಾಟೀಲ, ನಿರ್ಮಿತಿ ಕೇಂದ್ರದ ಇಂಜಿನಿಯರ್‌ಗಳಾದ ರಾಘವೇಂದ್ರ, ಕರಿಯಪ್ಪ ಮತ್ತಿತರರು ರಾಜಾಸೀಟು ಅಭಿವೃದ್ಧಿ ಸಂಬಂಧ ಹಲವು ಮಾಹಿತಿ ನೀಡಿದರು.
ರಾಜಾಸೀಟು ಅಭಿವೃದ್ಧಿಗೆ ಸಂಬಂಧಿಸಿದಂತೆ ಪರಿಸರಕ್ಕೆ ಪೂರಕವಾದ ಹಾಗೂ ಪ್ರವಾಸಿಗರ ವೀಕ್ಷಣೆಗೆ ಆಕರ್ಷಣೀಯಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು. ಇದಕ್ಕೂ ಮೊದಲು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರು, ನಗರದ ಜೂನಿಯರ್ ಕಾಲೇಜು ಆವರಣಕ್ಕೆ ತೆರಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಜಾಗ ನೀಡುವ ಸಂಬಂಧ ಸ್ಥಳ ಪರಿಶೀಲನೆ ಮಾಡಿದರು. ಡಿಡಿಪಿಐ ಬಸವರಾಜ ಮತ್ತಿತರರು ಉಪಸ್ಥಿತರಿದ್ದರು. ನಂತರ ಮಹದೇವಪೇಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮಾರುಕಟ್ಟೆ ಹಾಗೂ ರಸ್ತೆ ವಿಸ್ತರಣೆ ಕಾರ್ಯವನ್ನು ಪರಿಶೀಲಿಸಿದರು.