ವಿದ್ಯಾವಂತರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದೆ: ಸಕ್ಸೇನ
ಚಿಕ್ಕಮಗಳೂರು, ಮೇ 21: ಸಮಾಜದಲ್ಲಿ ಮಾನವ ಹಕ್ಕುಗಳ ಕುರಿತ ಜಾಗೃತಿ ಮೂಡಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಿ.ಸಕ್ಸೇನ ಹೇಳಿದ್ದಾರೆ.
ನಗರದ ಗಾಯತ್ರಿ ದೇವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ಕುರಿತ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾವಂತರಲ್ಲಿ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದೆ. ನಮ್ಮಂತೆ ಬೇರೆಯವರ ಹಕ್ಕುಗಳನ್ನು ಕಾಪಾಡುವ ಜವಾಬ್ದಾರಿಯಿಂದ ಸುಶಿಕ್ಷಿತರು ನುಣುಚಿಕೊಳ್ಳುತ್ತಿದ್ದು, ಇದರಿಂದ ಮಾನವ ಆಯೋಗಕ್ಕೆ ಹಕ್ಕುಗಳ ಉಲ್ಲಂಘನೆ ಕುರಿತು ಪ್ರಕರಣ ದಾಖಲಿಸುವವರ ಸಂಖ್ಯೆ ದ್ವಿಗುಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ವಯಂ ಸೇವಾ ಸಂಸ್ಥೆಗಳಿಂದ ಮಾನವ ಹಕ್ಕುಗಳ ಕುರಿತ ಜಾಗೃತಿಯಾಗಬೇಕು. ಸಮಾಜದ ಉನ್ನತ ಸ್ಥಾನದಲ್ಲಿರುವ ವಿದ್ಯಾವಂತರು ಇವುಗಳ ಅರಿವು ಪಡೆಯಬೇಕು. ನಮ್ಮಂತೆ ಬೇರೆಯವರು ಕೂಡ ಮನುಷ್ಯರು ಎಂದು ತಿಳಿದು ಹಕ್ಕುಗಳಿಗೆ ಗೌರವ ನೀಡುವ ಕೆಲಸ ಆಗಬೇಕು ಎಂದು ಹೇಳಿದರು.
ಹಿಂದೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದವು ಇಂದು ಕಡಿಮೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಇವುಗಳ ಅರಿವು ಪ್ರತಿಯೊಬ್ಬರಲ್ಲಿ ಆದಾಗ ಉಲ್ಲಂಘನೆ ಮಾಡುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿಸ್ವಾಮಿ ಮಾತನಾಡಿದರು. ರಾಜ್ಯ ಮಾನವ ಹಕ್ಕುಗಳ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಾನವ ಹಕ್ಕುಗಳ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಬಾನುಮತಿ ಎಸ್.ಗೌಡ, ಸಂಘಟನಾ ಕಾರ್ಯದರ್ಶಿ ಎಚ್.ಸಿ.ಜಯರಾವ್, ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿ ಶುಭ ಜಯರಾವ್, ಜಿಲ್ಲಾಧ್ಯಕ್ಷ ಕೆ.ರತ್ನಾಕರರಾವ್, ವಕೀಲ ಎಚ್.ಸಿ.ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.