‘ಪೊಲೀಸರು ಜನಸೆ್ನೀಹಿಯಾಗಿ ಕಾರ್ಯನಿರ್ವಹಿಸಲಿ: ಸಕ್ಸೇನಾ
ಚಿಕ್ಕಮಗಳೂರು, ಮೇ 21: ಪೊಲೀಸ್ ಇಲಾಖೆಯವರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವುದರೊಂದಿಗೆ ಸಾರ್ವಜನಿಕರ ರಕ್ಷಣೆ ನೀಡಲು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಮಾನವನ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ .ಸಿ. ಸಕ್ಸೇನಾ ತಿಳಿಸಿದ್ದಾರೆ.
ಅವರು ಶನಿವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ಲೋಬಲ್ ಕನ್ವನ್ಸ್ ಇಂಡಿಯಾ ಹಾಗೂ ಕೇರ್ ಮತ್ತು ಅಕಾಡಮಿ ಆಫ್ ಗಾಂಧಿಯನ್ ಸ್ಟಡೀಸ್ ರವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಹ್ಯೂಮನ್ ರೈಟ್ಸ್ ಆ್ಯಂಡ್ ಜಂಡರ್ ಸೊಸೈಟಿ ಹಾಗೂ ಮಾನವ ಹಕ್ಕು ಮತ್ತು ಲಿಂಗ ಸಮಾನತೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾರ್ವಜನಿಕರು ತಮಗಾದ ತೊಂದರೆ ಕುರಿತು ದೂರು ನೀಡಲು ಬಂದಾಗ ಪೊಲೀಸರು ದೂರನ್ನು ಸ್ವೀಕರಿಸಿ ತನಿಖೆ ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ಗೌರವಯುತ ನಾಗರಿಕರು ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಮುಂದಾಗುತ್ತಿಲ್ಲ. ಹೀಗಾಗದಂತೆ ಎಚ್ಚರ ವಹಿಸಬೇಕು ಎಂದರು.
ಯಾವುದೇ ಪ್ರಕರಣದಲ್ಲಿ ಯಾರನ್ನಾದರೂ ದಸ್ತಗಿರಿ ಮಾಡುವ ಸಂದರ್ಭದಲ್ಲಿ ಅವರಿಗೆ ಯಾವ ಉದ್ದೇಶಕ್ಕಾಗಿ ದಸ್ತಗಿರಿ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಬೇಕು. ಆ ಸಂದರ್ಭದಲ್ಲಿ ಸಮವಸ್ತ್ರ ಧರಿಸಿರಬೇಕು. ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಾಗ ಪೊಲೀಸ್ ಇಲಾಖೆಯವರು ಅವುಗಳನ್ನು ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ತಿಳಿಸಬೇಕು ಎಂದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು, ಸಂಪನ್ಮೂಲ ವ್ಯಕ್ತಿ ಹಾಗೂ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಾಗೂ ಇನ್‌ಸ್ಪೆಕ್ಟರ್ ಉಪಸ್ಥಿತರಿದ್ದರು.