ಘನತ್ಯಾಜ್ಯ ನಿರ್ವಹಣಾ ಯೋಜನೆ ಅನುಷ್ಠಾನಕ್ಕೆ ಅನುಮೋದನೆ
ಮಡಿಕೇರಿ, ಮೇ 21: ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್‌ನಡಿ ಕೊಡಗು ಜಿಲ್ಲಾ ವ್ಯಾಪ್ತಿಯ ಮಡಿಕೆೇರಿ ನಗರಸಭೆ, ವೀರಾಜಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯತ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ದೊರಕಿದೆ.
ಮಡಿಕೇರಿ ನಗರಸಭೆಗೆ ಸಂಬಂಧಿಸಿದಂತೆ ಸುಮಾರು 4.96 ಕೋಟಿ ವೆಚ್ಚದ ವಿಸೃತ ಕ್ರಿಯಾ ಯೋಜನೆ, ಕುಶಾಲನಗರ ಪಪಂ 3.80 ಕೋಟಿ ರೂ. ಯೋಜನೆ ಮತ್ತು ವೀರಾಜಪೇಟೆ ಪಪಂ 2.26 ಕೋಟಿ ರೂ. ವೆಚ್ಚದ ಯೋಜನಾ ವರದಿಗೆ ರಾಜ್ಯದ ಉನ್ನತ ಮಟ್ಟದ ಸಮಿತಿ ತಾಂತ್ರಿಕ ಅನುಮೋದನೆಯನ್ನು ನೀಡಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಘನತ್ಯಾಜ್ಯ ನಿರ್ವಹಣೆಯ ಯೋಜನೆ ಆಡಳಿತಾತ್ಮಕ ಒಪ್ಪಿಗೆಯನ್ನು ಪಡೆಯಬೇಕಾಗಿದ್ದು, ಬಳಿಕ ಯೋಜನೆ ಜಾರಿಗೆ ಬರಲಿದೆ. ಕೇಂದ್ರ ಪುರಸ್ಕೃತ ಯೋಜನೆಯಡಿ ಒಟ್ಟು ಯೋಜನಾ ಮೊತ್ತದ ಶೇ. 20ರಷ್ಟನ್ನು ಕೇಂದ್ರ ಸರಕಾರ ಭರಿಸುತ್ತದೆ. ಉಳಿದ ಮೊತ್ತವನ್ನು ರಾಜ್ಯ ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳು ಒದಗಿಸಬೇಕಾಗುತ್ತದೆ. ಆದರೆ, ಸ್ಥಳೀಯ ಸಂಸ್ಥೆಗಳಿಗೆ ದೊಡ್ಡ ಮೊತ್ತವನ್ನು ನೀಡುವುದು ಅಸಾಧ್ಯವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೇ ಸಹಕಾರ ನೀಡಬೇಕಾಗಿದೆ ಎಂದು ಮಾಹಿತಿ ನೀಡಿದರು.
ಘನ ತ್ಯಾಜ್ಯದ ವೈಜ್ಞಾನಿಕ ವಿಂಗಡಣೆ
ಆಯಾ ನಗರಸಭೆೆ ಮತ್ತು ಪಪಂಗಳಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಪರಿಸರಕ್ಕೆ ಹಾನಿಯಾಗದಂತೆ ನಿರ್ದಿಷ್ಟ ಸ್ಥಳದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಸಂಸ್ಕರಿಸಿ ವಿಲೇವಾರಿ ಮಾಡುವುದು ಯೋಜನೆಯ ಉದ್ದೇಶವಾಗಿದೆ.
ಮಡಿಕೇರಿಯ ಘನತ್ಯಾಜ್ಯ ನಿರ್ವಹಣೆಯ ಯೋಜನಾ ವರದಿಯಲ್ಲಿ ಸೂಚಿಸಿರುವಂತೆ, 2011 ರ ಜನಗಣತಿಯಂತೆ 33,381 ಜನಸಂಖ್ಯೆ ಇರುವ ನಗರದಲ್ಲಿ ಪ್ರತಿನಿತ್ಯ 33.80 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ 28.70 ಟನ್ ತ್ಯಾಜ್ಯವನ್ನಷ್ಟೆ ಸಂಗ್ರಹಿಸಲು ನಗರಸಭೆಗೆ ಸಾಧ್ಯವಾಗುತ್ತಿದೆ. ಕಾರ್ಮಿಕರ, ವಾಹನಗಳ ಕೊರತೆಯಿಂದ ನಗರ ವ್ಯಾಪ್ತಿಯ ಸಂಪೂರ್ಣ ಕಸವನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಆಧುನಿಕ ಯಂತ್ರೋಪಕರಣಗಳು ಇಲ್ಲದಿರುವುದರಿಂದ ಸಂಗ್ರಹಿಸಿದ ಕಸದ ಸಮರ್ಪಕ ವಿಲೆೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ನೂತನ ಯೋಜನೆಯಿಂದ ಇದು ಸಾಧ್ಯವಾಗಬಹುದು ಎನ್ನುವುದು ಅಧಿಕಾರಿಗಳ ನಿರೀಕ್ಷೆ ಎಂದು ಮನೋಹರ್ ತಿಳಿಸಿದರು.
ಕೊಡಗು ಬಯಲು ಶೌಚ ಮುಕ್ತ ಜಿಲ್ಲೆ
ಕೊಡಗು ಜಿಲ್ಲೆಯ ನಗರ ಮತ್ತು ಪಟ್ಟಣಗಳು ಅಗತ್ಯ ಶೌಚಾಲಯ ವ್ಯವಸ್ಥೆಗಳನ್ನು ಹೊಂದಿದ್ದು, ಶೀಘ್ರದಲ್ಲೇ ಬಯಲು ಶೌಚ ಮುಕ್ತ ನಗರ ಪ್ರದೇಶಗಳ ಜಿಲ್ಲೆಯೆಂದು ಘೋಷಿಸುವ ಸಾಧ್ಯತೆಗಳಿದೆ ಎಂದು ಯೋಜನಾ ನಿರ್ದೇಶಕ ಮನೋಹರ್ ಹೇಳಿದರು.
ಕಳೆದ 2011ರ ಜನಗಣತಿಯ ಹಂತದಲ್ಲಿ ಜಿಲ್ಲೆಯ ನಗರ ಪ್ರದೇಶಗಳಲ್ಲಿ 1,053 ಶೌಚಾಲಯಗಳ ಅಗತ್ಯವಿರುವುದನ್ನು ಗುರುತಿಸಲಾಗಿತ್ತು. ಇದೀಗ ಸ್ವಚ್ಛ ಭಾರತ್ ಮಿಷನ್‌ನಡಿ ಇದನ್ನು ಪರಿಶೀಲಿಸಿದಾಗ ಶೌಚಾಲಯಗಳ ಅಗತ್ಯತೆ 479ಕ್ಕೆ ಇಳಿದಿರುವುದು ಕಂಡು ಬಂದಿದ್ದು, ಈಗಾಗಲೇ ಈ ಶೌಚಾಲಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆಯಲ್ಲಿ ಈಗಾಗಲೇ ತಲಾ 16 ಲಕ್ಷ ರೂ. ವೆಚ್ಚದ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.