ಮೂಲಸೌಕರ್ಯ ಅಭಿವೃದ್ಧಿಗೆ ಮಧು ಬಂಗಾರಪ್ಪ ಸೂಚನೆ
ಸೊರಬ, ಮೇ 21: ಶುದ್ಧ ಕುಡಿಯುವ ನೀರು, ಶೌಚಾಲಯ ನಿರ್ವಹಣೆ ಹಾಗೂ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳುವಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಮಧು ಬಂಗಾರಪ್ಪಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.
ಶನಿವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಡಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಕಳೆದ ಬಾರಿ ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿ ಸಿ ದರ್ಜೆಯನ್ನು ನೀಡಿದೆ. ಇದರಿಂದ ಕಾಲೇಜಿನ ಅಭಿವೃದ್ಧಿಗೆ ಕೇಂದ್ರದಿಂದ ಬರುವ ಅನುದಾನಗಳು ಕಡಿತವಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಕೇವಲ ರಾಜ್ಯ ಸರಕಾರದ ಅನುದಾನದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಮುಂದಿನ ದಿನದಲ್ಲಿ ಸಿ ದರ್ಜೆಯಿಂದ ಕನಿಷ್ಠ ಬಿ ದರ್ಜೆ ತೆಗೆದುಕೊಳ್ಳುವಲ್ಲಿ ಪ್ರಯತ್ನಿಸಬೇಕು ಎಂದರು. ಸಭೆಯಲ್ಲಿದ್ದ ಪ್ರಾಂಶುಪಾಲ ಮುಹಮ್ಮದ್ ಅಲಿ, ಕುಡಿಯುವ ನೀರಿಗೆ 2 ಟ್ಯಾಂಕ್ ಖರೀದಿ, ಕ್ರೀಡಾಂಗಣ ಅಭಿವೃದ್ಧಿ, ತಾತ್ಕಾಲಿಕ ದೈಹಿಕ ಶಿಕ್ಷಕರ ನೇಮಕ, ಮಂಜೂರಾದ ಹೊಸ ವಿಭಾಗಗಳನ್ನು ತೆರೆಯುವುದು ಸೇರಿದಂತೆ ಕಾಲೇಜಿನ ಅಭಿವೃದ್ಧಿಗೆ ವಿವಿಧ ಮೂಲಭೂತ ಸೌಲಭ್ಯಗಳ ಬಗ್ಗೆ ಲಿಖಿತವಾಗಿ ಶಾಸಕರ ಗಮನಕ್ಕೆ ತಂದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಇರುವ ಅನುದಾನವನ್ನು ತುರ್ತು ಅಗತ್ಯವಾದ ಕಾಲೇಜಿನ ಅಭಿವೃದ್ಧಿಗಾಗಿ ಬಳಸಿಕೊಂಡು ಮಾರ್ಗಸೂಚಿಯಂತೆ ಖರ್ಚು ಮಾಡುವುದು. ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ತುರ್ತಾಗಿ ಅರ್ಜಿಯನ್ನು ಕರೆಯುವಂತೆ ಹಾಗೂ ಕಾಲೇಜಿನ ನಿಧಿಯಿಂದ ವೇತನ ನೀಡುವಂತೆ ತಿಳಿಸಿದರು. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ನಿರ್ಣಯ ಕೈಗೊಂಡು ಮಂಜೂರಾತಿ ನೀಡಲಾಯಿತು. ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಕೃಷ್ಣಮೂರ್ತಿ, ಕೆ.ಜಿ. ಬಸವರಾಜ್, ಮಂಜುನಾಥ ಮಾಸ್ತರ್, ಪುಟ್ಟಸ್ವಾಮಿ ವಕೀಲ, ಇ.ಎಚ್. ಮಂಜುನಾಥ್, ಅಹ್ಮದ್ ಶರೀಫ್ ಮತ್ತಿತರರು ಉಪಸ್ತಿತರಿದ್ದರು.