×
Ad

ಪ್ರಾಪರ್ಟಿ ಕಾರ್ಡ್, ಅಭಿವೃದ್ಧಿ ಶುಲ್ಕದ ವಿರುದ್ಧ ಪ್ರತಿಧ್ವನಿ: ಸೂಡಾದ ವಿರುದ್ಧ ಆಕ್ರೋಶ!

Update: 2016-05-21 22:15 IST

ಶಿವಮೊಗ್ಗ, ಮೇ 21: ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಾಪರ್ಟಿ ಕಾರ್ಡ್ (ಪಿ.ಆರ್.) ಹಾಗೂ ಕೆರೆ ಅಭಿವೃದ್ದಿ ಶುಲ್ಕ ಸಂಗ್ರಹ ವಿಷಯ ಪ್ರತಿಧ್ವನಿಸಿ ಬಿಸಿ ಬಿಸಿ ಚರ್ಚೆ ನಡೆಯಿತು. ಸದಸ್ಯರು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ)ದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಸರಿಯಲ್ಲ: ನಗರ ಯೋಜನಾ ಸ್ಥಾಯಿ ಸಮಿತಿಯ ಅಧ್ಯಕ್ಷ ನಾಗರಾಜ್ ಕಂಕಾರಿಯವರು ಪ್ರಾಪರ್ಟಿ ಕಾರ್ಡ್ ವಿಷಯ ಪ್ರಸ್ತಾಪಿಸಿ ಮಾತನಾಡಿ, ಪಿ.ಆರ್.ಕಾರ್ಡ್‌ನಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಈ ಹಿಂದಿನ ಪಾಲಿಕೆ ಸಭೆಯಲ್ಲಿ ಚರ್ಚಿಸಲಾಗಿತ್ತು. ಅಸಮರ್ಪಕ ಅನುಷ್ಠಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದರೆ, ಸೂಡಾ ಮನೀಶ್ ವೌದ್ಗಿಲ್‌ರವರು ಸದಸ್ಯರ ಈ ಅಭಿಪ್ರಾಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸದಸ್ಯರನ್ನು ದಲ್ಲಾಳಿಗಳು ಎಂದು ಟೀಕಿಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

 ಈ ಹಿಂದಿನ ಸರಕಾರದ ಅವಧಿಯಲ್ಲಿ ಮೈಸೂರು ಮತ್ತು ಶಿವಮೊಗ್ಗದಲ್ಲಿ ಪ್ರಾಪರ್ಟಿ ಕಾರ್ಡ್ ಯೋಜನೆ ಅನುಷ್ಠಾನ ಮಾಡಲಾಗಿತ್ತು. ಆದರೆ 6 ತಿಂಗಳ ಹಿಂದೆ ಮೈಸೂರನ್ನು ಕೈಬಿಡಲಾಗಿದೆ. ನಗರದಲ್ಲಿಯೂ ಈ ಯೋಜನೆ ಕೈಬಿಡಬೇಕೆಂಬ ಆಗ್ರಹ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಯೋಜನೆ ಸ್ಥಗಿತಗೊಳಿಸಲಾಗಿತ್ತು ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸಭೆಗೆ ಮಾಹಿತಿ ನೀಡಿದರು. ಇದೀಗ ಮತ್ತೆ ಕಡ್ಡಾಯಗೊಳಿಸಲಾಗಿದೆ. ಶಿವಮೊಗ್ಗದಲ್ಲಿ ಪ್ರಾಪರ್ಟಿ ಕಾರ್ಡ್ ನಿಂದ ತೊಂದರೆ ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವರು ಸದ್ಯಕ್ಕೆ ಕಡ್ಡಾಯ ಆದೇಶ ಮುಂದೂಡುವ ಬಗ್ಗೆ ಹೇಳಿದ್ದಾರೆ.ತಾನೂ ಸಹ ಕಡ್ಡಾಯದಿಂದ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದೇನೆ. ಶೇ. 90 ರಷ್ಟಾದರೂ ಆಸ್ತಿ ನೋಂದಣಿಯಾದಲ್ಲಿ ಈ ವ್ಯವಸ್ಥೆಯನ್ನು ಕಡ್ಡಾಯ ಮಾಡಬಹುದು ಎಂದರು.

ಆಕ್ರೋಶ: ಕಟ್ಟಡ ಪರವಾನಿಗೆ ನೀಡುವ ವೇಳೆ ಸೂಡಾ ಆಡಳಿತವು ಕೆರೆ ಅಭಿವೃದ್ಧಿ ಸಂಗ್ರಹ ವಿಷಯ ಮತ್ತೆ ಚರ್ಚೆಗೆ ಬಂದಿತು. ಕಾಂಗ್ರೆಸ್ ಸದಸ್ಯ ಎಸ್. ರಾಜಶೇಖರ್ ವಿಷಯ ಪ್ರಸ್ತಾಪಿಸಿ ಮಾತನಾಡಿದರು. ಈ ಹಿಂದೆ ಕಟ್ಟಡ ಪರವಾನಿಗೆ ಶುಲ್ಕ ಸಂಗ್ರಹದ ಬಗ್ಗೆ ಪಾಲಿಕೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಆದಾಗ್ಯೂ ಶುಲ್ಕ ಸಂಗ್ರಹವನ್ನು ಮುಂದುವರಿಸಲಾಗಿದೆ ಎಂದು ದೂರಿದರು. ಯಾವ ಆಧಾರದ ಮೇಲೆ ದರ ವಿಧಿಸಲಾಗಿದೆ ಎಂದು ಪ್ರಶ್ನಿಸಿದ ಸದಸ್ಯ ರಾಜಶೇಖರ್, ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸೂಡಾದ ಈ ನಿರ್ಧಾರವನ್ನು ಖಂಡಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದರು.ರಾಜಶೇಖರ್‌ರವರ ಮಾತುಗಳಿಗೆ ಆಕ್ಷೇಪ ವ್ಯಕ್ತ ಪಡಿಸಿದ ಉತ್ತರಿಸಿದ ಆಯುಕ್ತೆ, ನಿರ್ಣಯ ಕೈಗೊಳ್ಳಲು ನಿಮಗೆ ಅಧಿಕಾರವಿದೆ. ಆದರೆ ಅದನ್ನು ಒಪ್ಪಲೇಬೇಕೆಂದು ಕಾನೂನಿನಲ್ಲಿ ಇಲ್ಲ. ಸರಕಾರದ ಸ್ಪಷ್ಟೀಕರಣಕ್ಕೆ ಪತ್ರ ಬರೆಯಲಾಗಿದೆ ಎಂದರು. ಈ ಸಂಬಂದ ಮಾತನಾಡಿದ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಆಯುಕ್ತರ ಜೊತೆ ಚರ್ಚೆ ನಡೆಸಲಾಗಿದೆ. ಒಂದು ಎಕರೆ ಜಾಗಕ್ಕೆ 1 ಲಕ್ಷ ರೂಪಾಯಿ ವಿಧಿಸಲಾಗುತ್ತಿತ್ತು. ಇದು ನಾಗರಿಕರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನೂ ಕೈಬಿಡಲು ಕೋರಲಾಗಿದೆ. ಸದ್ಯದಲ್ಲೇ ಈ ಬಗ್ಗೆ ತೀರ್ಮಾನಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News