ಮೂಲಸೌಕರ್ಯ-ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಮೇ 21: ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ಇಲ್ಲಿನ ಸಿವಿ ರಾಮನ್‌ನಗರದ ಕ್ಷೇತ್ರದಲ್ಲಿ ಪಿ.ರಮೇಶ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಎರಡನೆ ವರ್ಷದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಉದ್ಯೋಗಾವಕಾಶಗಳಿಗೇನೂ ಕೊರತೆ ಇಲ್ಲ. ಆದರೆ, ಉದ್ಯೋಗಾವಕಾಶಗಳಿಗೆ ಸಂಬಂಧ ಪಟ್ಟಂತೆ ಬೇಕಾಗಿರುವ ಕೌಶಲ್ಯದ ಕೊರತೆ ಇದೆ.
ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಯುವ ಜನತೆಗೆ ಅಗತ್ಯವಿರುವ ತರಬೇತಿ ದೃಷ್ಟಿಯಿಂದ ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಯೋಗ ಇಲಾಖೆಯನ್ನು ಪ್ರಾರಂಭಿಸಿದ್ದು, ಈ ಬಾರಿಯ ಆಯವ್ಯಯದಲ್ಲಿ 500ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದರು. ಕಾಲೇಜು ಶಿಕ್ಷಣದಲ್ಲೂ ಕೆಲವು ನ್ಯೂನತೆಗಳಿದ್ದು, ಅವುಗಳನ್ನು ಸರಿಪಡಿಸುವ ಮೂಲಕ ಯುವ ಜನತೆಯಲ್ಲಿ ಹೊಸ ಕೌಶಲ್ಯಗಳನ್ನು ಬೆಳೆಸಲು ಅಗತ್ಯವಿರುವ ಬದಲಾವಣೆಗಳನ್ನು ತರುವತ್ತಲೂ ಸರಕಾರ ಕಾರ್ಯನಿರತವಾಗಿದೆ. ಈ ಇಲಾಖೆ ನನ್ನ ಅಧೀನದಲ್ಲೇ ಇರಲಿದೆ ಎಂದು ಹೇಳಿದರು. ಮೇಳದಲ್ಲಿ ಪಾಲ್ಗೊಂಡಿದ್ದ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಪ್ರಾರಂಭವಾಗಿರುವ ಕೌಶಲ್ಯಾಭಿವೃದ್ಧಿ ಇಲಾಖೆ ದೇಶದಲ್ಲೆ ಮೊದಲ ಪ್ರಯತ್ನ. ಅಲ್ಲದೆ, ಕೈಗಾರಿಕೆಗಳಿಗೆ ಅನುಕೂಲವಾಗುವ ವಾತಾವರಣವನ್ನೂ ನಿರ್ಮಿಸಲಾಗುತ್ತಿದೆ ಎಂದರು.
ಕೈಗಾರಿಕೆಗಳು ಹೆಚ್ಚಾದಾಗ ಉದ್ಯೋಗ ಸೃಷ್ಟಿಯೂ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ನಡೆಸಿದ ಇನ್ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶ ಬಹಳ ಫಲವನ್ನು ನೀಡುತ್ತಿದೆ ಎಂದ ಅವರು, ಸ್ವಯಂ ಉದ್ಯೋಗ ಪ್ರಾರಂಭಿಸುವವರಿಗೆ ರಾಜ್ಯದಲ್ಲಿ ಸೂಕ್ತ ವಾತಾವರಣವಿದೆ. ಅದರಲ್ಲೂ ಮಹಿಳೆರಿಗಂತೂ ಹೆಚ್ಚಿನ ಅವಕಾಶ ಹಾಗೂ ಸೌಲಭ್ಯವನ್ನು ನೀಡಲಾಗುತ್ತಿದ್ದು, ಸ್ವಯಂ ಉದ್ಯೋಗ ಪ್ರಾರಂಭಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು.
ಮೇಳ 15ಸಾವಿರಕ್ಕೂ ಹೆಚ್ಚು ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿ ಆಯಿತು. 127 ಕ್ಕೂ ಹೆಚ್ಚು ಕಂಪೆನಿಗಳು ಐಟಿ, ಬ್ಯಾಂಕಿಂಗ್, ಇ ಕಾಮರ್ಸ್ ಮತ್ತು ಸೇವಾ ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶಗಳನ್ನು ತೋರಿಸಿಕೊಟ್ಟಿದ್ದೇವೆ ಎಂದು ಆಯೋಜಕ ಪಿ.ರಮೇಶ್ ತಿಳಿಸಿದರು. ಸಚಿವ ಡಾ.ಎಚ್.ಸಿ.ಮಹದೇವಪ್ಪ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹೀಂ ಪಾಲ್ಗೊಂಡಿದ್ದರು.