ದೋಣಿ ಸಂಚಾರ ಮುಂದುವರಿಕೆಗೆ ಸ್ಥಳೀಯರ ಆಗ್ರಹ
ಅಂಕೋಲಾ, ಮೇ 22: ಇಲ್ಲಿನ ಸಮೀಪದ ಗಂಗಾವಳಿ-ಮಂಜಗುಣಿ ದೋಣಿ ಸಂಚಾರವನ್ನು ಮೇ 27ರ ವರೆಗೆ ಮಾತ್ರ ನಡೆಸುತ್ತೇವೆ ಎಂದು ಗುತ್ತಿಗೆದಾರ ಬಂದರು ಇಲಾಖೆಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಗೋಕರ್ಣದ ಸುತ್ತಮುತ್ತಲಿನ ನಾಗರಿಕರು ಮತ್ತು ಅಂಕೋಲಾದ ನಾಗರಿಕರು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಟಾ ತಾಲೂಕಿನ ಕೆಲವು ರಾಜಕಾರಣಿಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಬಾರ್ಜ್‌ನ ಹೆಸರಿನಲ್ಲಿ ಜನತೆಗೆ ಹತ್ತಿರವಾಗಲು ಹಪಹಪಿಸುತ್ತಿದ್ದಾರೆ. ಮಳೆಗಾಲದಲ್ಲಿ ದೋಣಿ ಸಂಚಾರದ ಸ್ಥಿತಿ-ಗತಿಗಳನ್ನು ಗಮನಿಸಿದ ಬಂದರು ಇಲಾಖೆಯ ಅಧಿಕಾರಿಗಳು ಬಾರ್ಜ್ ಸೇವೆ ಒದಗಿಸಲು ಮುಂದಾಗಿ ಈಗಾಗಲೇ 1.80 ಕೋಟಿ ರೂ. ವೆಚ್ಚದಲ್ಲಿ ಮಂಗಳೂರಿನಲ್ಲಿ ಬಾರ್ಜ್‌ನ್ನು ನಿರ್ಮಿಸಲಾಗಿದೆ. ಅದರಂತೆ ಗಂಗಾವಳಿ ಮತ್ತು ಮಂಜಗುಣಿಯಲ್ಲಿ ಧಕ್ಕೆಯೂ ಕೂಡ ನಿರ್ಮಾಣಗೊಂಡಿದೆ ಎಂದರು.
ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಬಾರ್ಜ್ ಸೇವೆ ವಿಳಂಬವಾಗುತ್ತಿದೆ. ಆದರೆ ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವು ರಾಜಕಾರಣಿಗಳು ಬಾರ್ಜ್ ವ್ಯವಸ್ಥೆ ಕಲ್ಪಿಸಿದ್ದು ನಾವೇ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಒಂದು ವಾರದೊಳಗಾಗಿ ಬಾರ್ಜ್ ಸೇವೆ ಪ್ರಾರಂಭವಾಗಲಿದೆ ಎಂದು ಕಳೆದೆರಡು ತಿಂಗಳಿಂದ ರಾಜಕಾರಣಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ ವಾಸ್ತವದಲ್ಲಿ ಇವರಿಗೆ ಇಲಾಖೆಯಿಂದಾಗಿರುವ ತಾಂತ್ರಿಕ ತೊಂದರೆಗಳ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ. ಒಂದು ಕಡೆ ಈ ರಾಜಕಾರಣಿಗಳ ಅಬ್ಬರದ ಪ್ರಚಾರ ನಡೆದರೆ, ಇನ್ನು ಅಂಕೋಲಾ ತಾಲೂಕಿನ ಕೆಲವು ವ್ಯಕ್ತಿಗಳು ಮಾಹಿತಿ ಹಕ್ಕಿನಡಿ ಇಲಾಖೆಯವರಿಗೆ ಮಾಹಿತಿ ಕೇಳುವುದನ್ನೇ ತಮ್ಮ ಉದ್ಯೋಗ ವನ್ನಾಗಿಸಿಕೊಂಡಿದ್ದು, ಈಗ ಡಿಂಗಿ ನಡೆಸುತ್ತಿರುವ ಅಬ್ದುರ್ರಹ್ಮಾನ್ ಸಾಬ್ ಅವರು, ಇಂತವರ ಕಿರಿಕಿರಿಯಿಂದಾಗಿ ಮೇ 27ರ ನಂತರ ನನ್ನಿಂದ ದೋಣಿ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನ ಸೇವೆಯನ್ನು ರದ್ದುಪಡಿಸಬೇಕೆಂದು ಇಲಾಖೆಯವರಿಗೆ ಮನವಿ ಸಲ್ಲಿಸಿದ್ದಾರೆ.
ದೋಣಿ ಸಂಚಾರ ಸ್ಥಗಿತಗೊಂಡರೆ ಜನರು ಪರದಾಡಬೇಕಾಗುತ್ತದೆ. ರಾಜಕಾರಣಿಗಳು ತಮ್ಮ ಪ್ರತಿಷ್ಠೆಯನ್ನು ಬಿಂಬಿಸಲು ಹೊರಟವರು ಮೇ 27ರೊಳಗಾಗಿ ಬಾರ್ಜ್ ಸೇವೆ ಆರಂಭವಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಈಗ ನಡೆಯುತ್ತಿರುವ ದೋಣಿ ಸಂಚಾರ ಮುಂದುವರಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಇಲಾಖೆ ಮತ್ತು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.