ಜೂ. 3: ಜಾನಪದ ಪರಿಷತ್ ಉದ್ಘಾಟನೆ
ಮಡಿಕೇರಿ, ಮೇ 22: ಕೊಡಗು ಜಿಲ್ಲಾ ಜಾನಪದ ಪರಿಷತ್‌ನ ಉದ್ಘಾಟನೆಯನ್ನು ಜಾನಪದ ಉತ್ಸವವಾಗಿ ಜೂನ್ 3ರಂದು ಕುಶಾಲನಗರದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ. ಅಂದು ಸೋಮವಾರಪೇಟೆ ತಾಲೂಕು ಘಟಕದ ಉದ್ಘಾಟನೆಯೂ ನಡೆಯಲಿದೆ. ನಗರದಲ್ಲಿ ಜರಗಿದ ಜಿಲ್ಲಾ ಜಾನಪದ ಪರಿಷತ್ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಜೂನ್ 3ರಂದು ಜಾನಪದ ಉತ್ಸವದೊಂದಿಗೆ ಕುಶಾಲನಗರದಲ್ಲಿ ಜಿಲ್ಲಾ ಜಾನಪದ ಪರಿಷತ್ ಉದ್ಘಾಟನೆ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಂಘ ಸಂಸ್ಥೆಗಳ ಸಹಕಾರ ಕೋರಲಾಗಿದೆ ಎಂದು ತಿಳಿಸಿದರು.
ಕೊಡವ ಸಾಹಿತ್ಯ ಅಕಾಡಮಿ, ಅರೆಭಾಷಾ ಸಾಹಿತ್ಯ ಅಕಾಡಮಿ, ಬ್ಯಾರಿ ಅಕಾಡಮಿಗಳ ಸಹಕಾರ ಕೋರಲಾಗಿದ್ದು, ಕುಶಾಲನಗರದ ಕನ್ನಡ ಪರ ಸಂಘಟನೆಗಳೂ ಹಲವು ರೀತಿಯ ನೆರವು ನೀಡಲು ಮುಂದಾಗಿದೆ. ಅಂತೆಯೇ ಮಹಿಳಾ ಸಂಘಟನೆಗಳು, ಸ್ತ್ರೀಶಕ್ತಿ ಸಂಘಗಳು, ಸಾಮಾಜಿಕ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಜಾನಪದ ಉತ್ಸವ ಆಚರಿಸಲಾಗುತ್ತದೆ. ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು, ಸಂಸದರು, ಜಿಪಂ, ಕುಶಾಲನಗರ ಪಪಂ, ಮಡಿಕೇರಿ ನಗರಸಭೆ, ಸೋಮವಾರಪೇಟೆ ತಾಪಂ, ಸಹಕಾರಿ ಸಂಘಗಳ ಸಹಕಾರವನ್ನೂ ಉತ್ಸವದ ಯಶಸ್ಸಿಗೆ ಕೋರಲಾಗಿದೆ ಎಂದು ತಿಳಿಸಿದರು.
ಸುಮಾರು 25 ಕಲಾ ತಂಡಗಳು ಜಾನಪದ ಉತ್ಸವದ ಆಕರ್ಷಕ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮತ್ತು ಅರೆಭಾಷೆ ಸಾಹಿತ್ಯ ಅಕಾಡಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಸಭೆಯಲ್ಲಿ ಮಾತನಾಡಿ, ಕೊಡಗಿಗೆ ಜಾನಪದ ಪರಿಷತ್‌ನ ಅಗತ್ಯತೆ ಹೆಚ್ಚಾಗಿತ್ತು. ಈ ನಿಟ್ಟಿನಲ್ಲಿ ಅಕಾಡೆಮಿಗಳಿಂದ ಕಲಾತಂಡಗಳನ್ನು ಜಾನಪದ ಉತ್ಸವಕ್ಕೆ ಪ್ರಾಯೋಜಿಸುವುದಾಗಿ ಭರವಸೆ ನೀಡಿದರು. ಕೊಡಗಿನ ಕಲಾವಿದರ ತಂಡಗಳಿಂದ ಜಾನಪದ ಉತ್ಸವ ಸಂದರ್ಭ ಆಕರ್ಷಕ ಕಾರ್ಯಕ್ರಮ ನೀಡುವುದಾಗಿಯೂ ಅಕಾಡೆಮಿ ಅಧ್ಯಕ್ಷರು ತಿಳಿಸಿದರು.
ಪರಿಷತ್ ಸಂಘಟನಾ ಕಾರ್ಯದರ್ಶಿ ಮೇರಿಯಂಡ ಸಂಕೇತ್ ಪೂವಯ್ಯ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಮಡಿಕೇರಿ ತಾಲೂಕು ಅಧ್ಯಕ್ಷ ಅನಿಲ್ ಎಚ್.ಟಿ, ಜಿಲ್ಲಾ ಕಾರ್ಯದರ್ಶಿ ಉಜ್ವಲ್ ರಂಜಿತ್, ಅಂಬೆಕಲ್ ಕುಶಾಲಪ್ಪ, ಡಾ. ತೀತೀರ ರೇಖಾ ವಸಂತ್, ಅಲ್ಲಾರಂಡ ವಿಠಲ್ ನಂಜಪ್ಪ, ಮಾದೇಟಿರ ಬೆಳ್ಯಪ್ಪ, ಸರಸ್ವತಿ ಡಿ.ಎಡ್ ಕಾಲೇಜು ಪ್ರಾಂಶುಪಾಲ ಕುಮಾರ್, ನಗರಸಭಾ ಸದಸ್ಯೆಯರಾದ ಕಾವೇರಮ್ಮ ಸೋಮಣ್ಣ, ಸಂಗೀತಾ ಪ್ರಸನ್ನ, ಅಂಬೆಕಲ್ ನವೀನ್ ಕುಶಾಲಪ್ಪ, ಲಕ್ಷ್ಮೀ ಪ್ರಸಾದ್ ಪೆರ್ಲ, ಕೊಡಗು ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಮನು ಶೆಣೈ, ಹಿರಿಯ ಕಲಾವಿದರಾದ ಕುಡಿಯರ ಮುತ್ತಪ್ಪ, ಬಿ.ಸಿ.ಶಂಕರಯ್ಯ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.