×
Ad

ದೇವೇಗೌಡರು ಶೋಷಿತರ ಧ್ವನಿ: ರಮೇಶ್‌ಬಾಬು

Update: 2016-05-22 22:23 IST

ದಾವಣಗೆರೆ, ಮೇ 22: ಪ್ರಧಾನಿಯಾಗಿ ಕೇವಲ ಹತ್ತು ತಿಂಗಳ ಅವಧಿಯಲ್ಲಿ ಯಾರು ಮಾಡಲಾಗದ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಬಡವರ, ಶೋಷಿತರ ಧ್ವನಿಯಾದವರು ಮಣ್ಣಿನ ಮಗ ದೇವೇಗೌಡರು ಎಂದು ಜೆಡಿಎಸ್ ರಾಜ್ಯ ವಕ್ತಾರ ರಮೇಶ್‌ಬಾಬು ತಿಳಿಸಿದರು.

ನಗರದ ಅಭಿನವ ರೇಣುಕಮಂದಿರದಲ್ಲಿ ರವಿವಾರ ನಡೆದ ಎಚ್.ಡಿ. ದೇವೇಗೌಡ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರೈತನ ಮಗನಾಗಿ ಹುಟ್ಟಿ 1996ರಲ್ಲಿ ದೇಶದ ಪ್ರಧಾನಿಯಾಗಿ ಸುದೀರ್ಘ ರಾಜಕಾರಣ ಮಾಡಿದ ಏಕೈಕ ವ್ಯಕ್ತಿ ದೇವೇಗೌಡರು ಮಾತ್ರ. ಮಹಿಳೆಯರಿಗೆ ಮೀಸಲಾತಿ, ರಸಗೊಬ್ಬರಕ್ಕೆ ಸಬ್ಸಿಡಿ, ದಿಲ್ಲಿಗೆ ಮೆಟ್ರೋ ಜಾರಿ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಕೇವಲ ಹತ್ತು ತಿಂಗಳಲ್ಲಿ ಅನುಷ್ಠಾನಕ್ಕೆ ತಂದ ದೇವೇಗೌಡರು ದೇಶಕಂಡ ಅದ್ಬುತ ರೈತನಾಯಕ ಎಂದರು.

ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಮ್ಮಲ್ಲಿಯೇ ಹುಟ್ಟಿ ಬೆಳೆದು ದೇಶದ ಪ್ರಧಾನಿಯಾದ ದೇವೇಗೌಡರ ಮಹತ್ವ ಅನೇಕರಿಗೆ ತಿಳಿದಿಲ್ಲ. ಈ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ದೇವೇಗೌಡರ ಅಧ್ಯಯನ ಪೀಠವೊಂದನ್ನು ತೆರೆಯಬೇಕು ಎಂದು ಅವರು ತಿಳಿಸಿದರು.

ನಂತರ ವಿರಕ್ತಮಠದ ಶ್ರೀ ಬಸವಪ್ರಭುಶ್ರೀ ಮಾತನಾಡಿ, ದೇವೇಗೌಡರ ಹೆಸರಿನಲ್ಲಿ ಆರಂಭಗೊಳ್ಳುತ್ತಿರುವ ಪ್ರತಿಷ್ಠಾನ ಸಮಾಜಮುಖಿಯಾಗಿ ಶೋಷಿತರ, ಬಡವರ, ನೊಂದವರ, ದಲಿತರ ಪರವಾಗಿ ಕೆಲಸ ನಿರ್ವಹಿಸಬೇಕು. ಚಿತ್ರದುರ್ಗದ ಮುರುಘಾಮಠದಂತೆ ದೇವೇಗೌಡ ಪ್ರತಿಷ್ಠಾನವು ಜಾತ್ಯತೀತ ಪಕ್ಷಾತೀತವಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.

ಕಾಗಿನೆಲೆ ಗುರುಪೀಠದ ನಿರಂಜನಾನಂದ ಪುರಿ ಶ್ರೀ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರ ಹೆಸರಿನಲ್ಲಿ ಪ್ರತಿಷ್ಠಾನ ಆರಂಭಗೊಂಡಿರುವುದು ಸಂತಸದ ವಿಚಾರ. ಈ ಪ್ರತಿಷ್ಠಾನದಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಸಹಾಯ ಮಾಡುವ ಮೂಲಕ ಉತ್ತಮ ಹೆಸರು ಗಳಿಸಲಿ ಎಂದು ಆಶಿಸಿದರು.

 ಸಮಾರಂಭ ಚಿತ್ರದುರ್ಗ ಮಾಚಿದೇವ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಸಂತಸೇವಾಲಾಲ ಶ್ರೀ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎ. ಶರವಣ, ಮಾಜಿ ಶಾಸಕ ಕೆ. ಮಲ್ಲಪ್ಪ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ, ಚನ್ನಗಿರಿ ರಾಜ್ಯ ಜನತಾದಳದ ಪ. ಪಂಗಡದ ಅಧ್ಯಕ್ಷ ಹೊದಿಗೆರೆ ರಮೇಶ್, ಬಿ. ನಾಗೇಶ್ವರರಾವ್, ಶೀಲಾನಾಯ್ಕಿ, ಟಿ. ದಾಸಕರಿಯಪ್ಪ, ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ಕೆ.ಎಸ್. ಬಸವರಾಜ್, ಎಸ್.ಕೆ. ಚಂದ್ರಶೇಖರ್, ಸಣ್ಣಫಕ್ಕಿರಪ್ಪ, ಎಂ. ಪರಮೇಶ್ವರಪ್ಪ, ಎಸ್.ಎಚ್. ಪ್ರಕಾಶ್, ಅಮಾನುಲ್ಲಾಖಾನ್, ವನಜಾಕ್ಷಮ್ಮ, ಕೆ.ಆರ್. ತಿಪ್ಪೇಸ್ವಾಮಿ, ಬಿ. ದಾದಾಪೀರ್, ಎಸ್. ಹೊನ್ನಮ್ಮ, ಮಲ್ಲಾಪುರ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಸಮಿತಿಯ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ ಪ್ರಾಸ್ತಾವಿಕ ಮಾತನಾಡಿದರು. ಬಾತಿ ಶಂಕರ ಸ್ವಾಗತಿಸಿದರು. ಲಾವಣ್ಯಾ ಪ್ರಾರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News