×
Ad

ಆಂಗ್ಲಭಾಷೆಗೆ ಮಾರುಹೋಗುತ್ತಿರುವ ಕನ್ನಡಿಗರು

Update: 2016-05-22 22:25 IST

ಶಿಕಾರಿಪುರ, ಮೇ 22: ಕನ್ನಡ ನಾಡಿನಲ್ಲಿ ಜನಿಸಿ ಕನ್ನಡ ಭಾಷೆ, ನಾಡು, ನುಡಿ, ನೆಲ. ಜಲದಿಂದ ಉನ್ನತ ಹುದ್ದೆಗೇರಿದ ಕನ್ನಡಿಗರು ಕನ್ನಡದ ಋಣ ತೀರಿಸುವ ಬದಲು ಆಂಗ್ಲಭಾಷೆಗೆ ಮಾರು ಹೋಗುತ್ತಿದ್ದಾರೆ ಎಂದು ಇಲ್ಲಿನ ಪುರಸಭಾ ಸದಸ್ಯ ರವಿ ದೂಪದಹಳ್ಳಿ ವಿಷಾಧಿಸಿದರು.

ಪಟ್ಟಣದ ಚನ್ನಕೇಶವನಗರದಲ್ಲಿ ಶನಿವಾರ ಸಂಜೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಸಾಹಿತ್ಯ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶತಶತಮಾನಗಳ ಇತಿಹಾಸದ ಕನ್ನಡ ಭಾಷೆ, ಸಾಹಿತ್ಯ ಅತ್ಯಂತ ಶ್ರೀಮಂತವಾದುದು. ಭಾಷೆಯನ್ನು ನಿತ್ಯ ಬಳಸುವ ಮೂಲಕ ನಶಿಸದಂತೆ ಕಾಪಾಡಬಹುದಾಗಿದೆ. ಆಂಗ್ಲಭಾಷೆಯ ವ್ಯಾಮೋಹಕ್ಕೆ ಬಲಿಯಾಗಿರುವ ಕನ್ನಡಿಗರು ಜನ್ಮ ನೀಡಿದ ತಾಯಿ, ಆಶ್ರಯ ನೀಡಿದ ನಾಡನ್ನು ಮರೆಯಬಾರದು ಎಂದರು. ಕನ್ನಡ ಭಾಷೆಯ ಬಗೆಗಿನ ಕೀಳರಿಮೆಯಿಂದಾಗಿ ಆಂಗ್ಲಭಾಷೆಯ ವ್ಯಾಮೋಹ ಹೆಚ್ಚಾಗುತ್ತಿದೆ. ಕನ್ನಡ ಭಾಷೆಯ ಮೇಲೆ ಅಭಿಮಾನವನ್ನು ಯುವಪೀಳಿಗೆಯಲ್ಲಿ ಮೂಡಿಸದಿದ್ದಲ್ಲಿ ಭಾಷೆಯ ಮೂಲಕ ಸಂಸ್ಕೃತಿ, ಇತಿಹಾಸ, ಪರಂಪರೆಯ ಅವನತಿಗೆ ಪರೋಕ್ಷವಾಗಿ ಸರ್ವರೂ ಕಾ ರಣಕರ್ತರಾಗಲಿದ್ದೇವೆ ಎಂದು ಎಚ್ಚರಿಸಿದರು. ಕೃಷಿ ಇಲಾಖೆಯ ನಿವೃತ್ತ ನಿರ್ದೇಶಕ ಸಿದ್ದಯ್ಯ ಹಿರೇಮಠ ಮಾತನಾಡಿ, ಕನ್ನಡ ಭಾಷೆಯನ್ನು ನಿತ್ಯ ಮನೆಯಲ್ಲಿ ಬಳಸುವ ಮೂಲಕ ಮಾತೃಭಾಷೆ ಉಳಿಸಬೇಕಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಪಾಪಯ್ಯ ಮಾತನಾಡಿ, ಕನ್ನಡ ಭಾಷೆಯ ಅಭಿವೃದ್ಧಿ ಏಳಿಗೆ ಕೇವಲ ಕನ್ನಡ ಸಾಹಿತ್ಯ ಪರಿಷತ್‌ಗೆ ಮಾತ್ರ ಸೀಮಿತ ಎಂದು ಭಾವಿಸದೆ ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂಬುದನ್ನು ಅರಿಯಬೇಕಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಕಾನೂರು, ಸಾಹಿತ್ಯ ಸಂಜೆ ಮೂಲಕ ಮನಸ್ಸುಗಳಲ್ಲಿ ಕನ್ನಡದ ಸಾಹಿತ್ಯ ಭಾಷೆಯ ಬಗೆಯ ಜಾಗೃತಿ ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ ಸಾಹಿತ್ಯ ಭಾಷೆಯ ಕಿಚ್ಚು ಹೆಚ್ಚಿಸುವ ಕಾರ್ಯಕ್ಕೆ ಕಸಾಪ ಶ್ರಮಿಸುತ್ತಿದೆ ಎಂದರು. ಉಪನ್ಯಾಸಕ ನಾಗಾನಾಯ್ಕ ಅವರಿಂದ ಕನ್ನಡ ಭಾಷೆಯ ಬಗ್ಗೆ ಉಪನ್ಯಾಸ ನಡೆಯಿತು. ವೇದಿಕೆಯಲ್ಲಿ ನಿವೃತ್ತ ಪ್ರಾಚಾರ್ಯ ಪುಟ್ಟಪ್ಪಗೌಡ, ಮಂಜಾಚಾರ್, ಸುವರ್ಣಮ್ಮ, ಸಿ.ಪಿ ಹೆಗಡೆ, ಹನುಮಂತಪ್ಪ, ರಾಜ ಶೇಖರ್, ಪ್ರಕಾಶ್ ಕೋನಾಪುರ ಮತ್ತಿತರರು ಉಪಸ್ಥಿ ತರಿದ್ದರು. ನೇಹ ದಿವ್ಯಾ ಪ್ರಾರ್ಥಿಸಿದರು. ಶಿಕ್ಷಕ ನಾಗರಾಜ್ ಸ್ವಾಗತಿಸಿ,ಉಳ್ಳಿ ಕರಿಬಸಪ್ಪ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News