×
Ad

ಗಿರಿಜನ ಹಸಲರು ಸಂಘದಿಂದ ಉಚಿತ ಸರಳ ಸಾಮೂಹಿಕ ವಿವಾಹ

Update: 2016-05-22 22:27 IST

ಮೂಡಿಗೆರೆ, ಮೇ 22: ಸರಳ ವಿವಾಹ ಸಮಾರಂಭಗಳು ಅದ್ದೂರಿಯಾಗಿ ನಡದರೆ ಸರಳತೆಗೆ ಭಂಗವುಂಟಾಗಲಿದೆ ಎಂದು ಹೊರನಾಡು ಕ್ಷೇತ್ರ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಶಿ ಹೇಳಿದ್ದಾರೆ.

  ರವಿವಾರ ತಾಲೂಕು ಗಿರಿಜನ ಹಸಲರು ಸಂಘದಿಂದ ಚರ್ಚ್ ಹಾಲ್‌ನಲ್ಲಿ ಆಯೋಜಿಸಿದ್ದ ಉಚಿತ ಸರಳ ಸಾಮೂಹಿಕ ವಿವಾಹ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹಗಳಲ್ಲಾದರೂ ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು. ಸರಳತೆ ಮೂಲಕ ಖರ್ಚು ಕಡಿಮೆ ಮಾಡಿ, ಉಳಿತಾಯದ ಮೂಲಕ ಜೀವನದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಿಕೊಳ್ಳಬೇಕು ಎಂದು ವಧು ವರರಿಗೆ ಕಿವಿಮಾತು ಹೇಳಿದರು.

ನವ ದಂಪತಿಗಳಿಗೆ ಮುಂದೆ ಆಗುವ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ, ನೈತಿಕ ಬದುಕಿನ ಸಾರ್ಥಕತೆ ಜೊತೆಗೆ ಸಾರ್ವಜನಿಕರೊಂದಿಗೆ ಸಹಬಾಳ್ವೆ ನಡೆಸುವ ಜೀವನ ಗುಣಗಳನ್ನು ಕಲಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಯಾವುದೋ ಒಂದು ವರ್ಗಕ್ಕೆ ಹೋಲಿಸುವುದು ಸರಿಯಲ್ಲ. ಅವರು ಮಹಾನ್ ಮಾನವತಾವಾದಿಗಳು. ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ರಾಷ್ಟ್ರಕ್ಕಾಗಿ ಮೀಸಲಿಟ್ಟು, ದೇಶವನ್ನು ಸುಂದರವಾಗಿ ಕಟ್ಟಲು ಶ್ರಮಿಸಿದವರು ಎಂದು ನುಡಿದರು.

  ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಸರಳ ಸಾಮೂಹಿಕ ವಿವಾಹಗಳಿಂದಾಗಿ ದಂಪತಿಗಳು ಜೀತಪದ್ಧತಿಯಿಂದ ಮುಕ್ತಿ ಹೊಂದುವಂತಾಗಿದೆ. ಹಿಂದಿನ ಕಾಲದಲ್ಲಿ ಮದುವೆಗೆ ಮಾಡಿದ ಸಾಲಕ್ಕಾಗಿ ಜೀತಕ್ಕಿದ್ದು, ಸಾವಿನ ನಂತರವೂ ಜೀತದಿಂದ ಮುಕ್ತಿ ಹೊಂದುತ್ತಿರಲಿಲ್ಲ. ಕಾಲವೀಗ ಬದಲಾಗಿ ಅಂತಹ ಜೀತದಿಂದ ಮುಕ್ತಿ ಹೊಂದಲು, ಉತ್ತಮ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಈ ಸಂದಭರ್ದಲ್ಲಿ ಮೂರು ಜೋಡಿ ವಧು ವರರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಅರ್ಚಕ ಪುತ್ತೂರಿನ ಚನ್ನಮುಗೇರ ಅವರು, ಕನ್ನಡ ಹಾಗೂ ತುಳು ಭಾಷೆಯಲ್ಲಿ ಮಂತ್ರ ಪಠಿಸಿ ಮಂಗಳಕಾರ್ಯ ನೆರವೇರಿಸಿದರು. ಕರಾವಳಿಯ ತುಳುನಾಡ ವಾದ್ಯ ನೆರೆದಿದ್ದವರನ್ನು ರಂಜಿಸಿತು. ವಿವಾಹ ಶುಭ ಕಾರ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಗಿರಿಜನ ಹಸಲರು ಸಂಘದ ಅಧ್ಯಕ್ಷ ಎಂ.ದೇಜಪ್ಪ ವಹಿಸಿದ್ದರು. ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಗೌರವಾಧ್ಯಕ್ಷ ಕೆ.ಮಾಣಿ, ಉಪಾಧ್ಯಕ್ಷ ಎಂ.ಐ.ಶಿವಪ್ಪ, ಪೂವಪ್ಪ ಕೆಳಗಣೆ, ಕೆ.ಟಿ.ಪೂವಪ್ಪ, ಹರೀಶ, ಗಣೇಶ, ಕೃಷ್ಣ, ರಘು, ನಾರಾಯಣ, ಧರಣಪ್ಪ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News