ರಾಜಕೀಯ ಪ್ರಾತಿನಿಧ್ಯ ನೀಡುವ ಪಕ್ಷಗಳನ್ನು ಬೆಂಬಲಿಸಿ: ಮಾದರಚೆನ್ನಯ್ಯ ಸ್ವಾಮೀಜಿ
ಬೆಂಗಳೂರು, ಮೇ 22: ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಇನ್ನಿತರ ಹುದ್ದೆಗಳನ್ನು ನೀಡುತ್ತೇವೆ ಎನ್ನುವ ಮೂಲಕ ದಲಿತರನ್ನು ಮತ್ತೊಂದು ಹತ್ತು ವರ್ಷಗಳ ಕಾಲ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಪಕ್ಷಗಳನ್ನು ತಿರಸ್ಕರಿಸಿ ಅಧಿಕಾರದ ಪ್ರಾತಿನಿಧ್ಯ ನೀಡುವ ರಾಜಕೀಯ ಪಕ್ಷಗಳನ್ನು ಬೆಂಬಲಿಸಿ ಎಂದು ಚಿತ್ರದುರ್ಗದ ಮಾದರ ಚೆನ್ನಯ್ಯ ಗುರು ಪೀಠದ ಶ್ರೀ ಮಾದರ ಚೆನ್ನಯ್ಯ ಸ್ವಾಮೀಜಿ ಕರೆ ನೀಡಿದ್ದಾರೆ. ರವಿವಾರ ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಾದಿಗ ದಂಡೋರ ಆಯೋಜಿಸಿದ್ದ ಮಾದಿಗ ಸಮಾಜದ ಚುನಾಯಿತ ಜನಪ್ರತಿನಿಧಿಗಳ ರಾಜ್ಯಮಟ್ಟದ ಪ್ರಥಮ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರದ ನಂತರ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಬಲರಾದವರೆ ರಾಜಕೀಯವಾಗಿ ಪ್ರಬಲರಾಗುತ್ತಿದ್ದಾರೆ. ಈ ಅನ್ಯಾಯವನ್ನು ತಡೆಗಟ್ಟಲು ದಲಿತ ಸಮುದಾಯ ಒಟ್ಟಾಗಿ ಹೋರಾಡಬೇಕು ಹಾಗೂ ರಾಜಕೀಯ ಪ್ರಾತಿನಿಧ್ಯ ನೀಡುವ ಪಕ್ಷಗಳಿಗೆ ಬೆಂಬಲ ನೀಡಬೇಕೆಂದು ಹೇಳಿದರು.
ನಾಲ್ಕು ದಶಕಗಳ ಹಿಂದೆ ವಿಧಾನಸಭೆಯಲ್ಲಿ ದಲಿತ ಸಮುದಾಯದ ಸಚಿವರು ಹಾಗೂ ಶಾಸಕರು ಹೆಚ್ಚಾಗಿ ಇರುತ್ತಿದ್ದರು. ಆದರೆ, ಈಗ ಆ ಸಂಖ್ಯೆ ಕೇವಲ ಆರಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಸಚಿವರ ಹಾಗೂ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ರಾಜಕೀಯ ಶಕ್ತಿಯನ್ನು ಪಡೆಯಬೇಕಾಗಿದೆ ಎಂದು ಕರೆ ನೀಡಿದರು. ಪ್ರಾತಿನಿಧ್ಯ ನೀಡುವ ಪಕ್ಷಗಳೆ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಂಜುನಾಥ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಗುರುತಿಸಲಿಲ್ಲ. ಹೀಗಾಗಿ, ದಲಿತ ಮುಖ್ಯಮಂತ್ರಿ ಎನ್ನುವುದು ಬರೀ ಪ್ರಚಾರ ಎನ್ನುವುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಹಿರಿಯೂರು ಆದಿಜಾಂಭವ ಶಾಖಾ ಮಠದ ಷಡಾಕ್ಷರಿ ಸ್ವಾಮೀಜಿ ಮಾತನಾಡಿ, ದಲಿತರು ಅದೇ ಸಮುದಾಯದ ಸ್ವಾಮೀಜಿಗಳನ್ನು ಹಾಗೂ ದಲಿತ ನಾಯಕರನ್ನು ಒಪ್ಪಿಕೊಳ್ಳುತ್ತಿಲ್ಲ, ಅಪ್ಪಿಕೊಳ್ಳುತ್ತಿಲ್ಲ. ಇದರಿಂದ, ದಲಿತ ನಾಯಕರು ರಾಜಕೀಯ ಪ್ರಾತಿನಿಧ್ಯ ಪಡೆಯಲು ಆಗುತ್ತಿಲ್ಲ ಎಂದು ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ದಲಿತ ಸ್ವಾಮೀಜಿಗಳು ಸೇರಿದಂತೆ ಇನ್ನಿತರ ಸಮುದಾಯದ ಸ್ವಾಮೀಜಿಗಳು ಹಾಗೂ ನಾಯಕರುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಿರೀಕ್ಷಿಸಿದ ಗುರಿಯನ್ನು ಮುಟ್ಟಬೇಕಾಗಿದೆ ಎಂದು ಅವರು ಇದೇ ವೇಳೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಮಾಜಿ ಸಚಿವ ಗೋವಿಂದ ಕಾರಜೋಳ, ಆದಿಜಾಂಭವ ಮಠದ ಮಾರ್ಕಂಡೇಯ ಸ್ವಾಮಿ, ಪಾಲನಹಳ್ಳಿ ಸಿದ್ದರಾಜು ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.