ಜನಪ್ರತಿನಿಧಿಗಳು, ಅಧಿಕಾರಿಗಳ ಭ್ರಷ್ಟಾಚಾರವನ್ನು ನಾಗರಿಕರು ಪ್ರಶ್ನಿಸಲಿ: ರಮೇಶ್ ಕುಮಾರ್

Update: 2016-05-22 18:25 GMT

ಬೆಂಗಳೂರು, ಮೇ 22: ಜನಪ್ರತಿನಿಧಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳ ಭ್ರಷ್ಟಾಚಾರವನ್ನು ಕುರಿತು ಪ್ರಶ್ನಿಸುವಂತಹ, ಪ್ರತಿಭಟಿಸುವಂತಹ ಮನಸ್ಥಿತಿಯನ್ನು ನಮ್ಮ ನಾಗರಿಕ ಸಮಾಜ ಕಳೆದುಕೊಂಡಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ಅಂಕಿತ ಪುಸ್ತಕ ನಗರದ ವಾಡಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರೊ.ಬರಗೂರು ರಾಮಚಂದ್ರಪ್ಪನವರ ‘ವರ್ತಮಾನ’, ‘ಶಬರಿ’ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ಜನತೆ ಕಣ್ಣಾರೆಕಂಡರೂ ಪ್ರತಿಭಟಿಸದಿರುವುದರಿಂದ ಅದು ಮಿತಿಮೀರುತ್ತಿದೆ ಎಂದು ಅಭಿಪ್ರಾಯಿಸಿದರು.

ಪ್ರಸ್ತುತ ದೇಶದಲ್ಲಿರುವ ಯಾವೊಬ್ಬ ಜನಪ್ರತಿನಿಧಿಯೂ ನಾಯಕನಾಗುವುದಕ್ಕೆ ಆರ್ಹತೆಯನ್ನೇ ಹೊಂದಿಲ್ಲ. ಇವರ್ಯಾರು ಜನರ ವಿಶ್ವಾಸ ಮತ್ತು ಪ್ರೀತಿಯಿಂದ ಆಯ್ಕೆಯಾದವರಲ್ಲ. ಕೇವಲ ಹಣ, ಜಾತಿ, ಅಧಿಕಾರದ ಬಲದಿಂದ ಆಯ್ಕೆಯಾದವರಾಗಿದ್ದಾರೆ. ಹೀಗಾಗಿ ಅವರ್ಯಾರಿಗೂ ದೇಶದ ಬಗ್ಗೆ, ಇಲ್ಲಿನ ಜನ ಸಾಮಾನ್ಯರ ಬಗ್ಗೆ ಯಾವುದೆ ಕಾಳಜಿಯಿಲ್ಲ ಎಂದು ಅವರು ವಿಷಾದಿಸಿದರು. ಜನಪರವಾದ ಶಾಸನಗಳನ್ನು ಜಾರಿ ಮಾಡಬೇಕಾಗಿ ರುವುದು ಜನಪ್ರತಿನಿಧಿಗಳ ಕರ್ತವ್ಯ. ಆದರೆ, ನಮ್ಮ ನಾಯಕರು ತಮ್ಮ ಕುಟುಂಬಸ್ಥರ ಹೆಸರುಗಳಲ್ಲಿ ಶಾಲಾ- ಕಾಲೇಜು ಹಾಗೂ ಆಸ್ಪತ್ರೆಗಳನ್ನು ತೆರೆಯುವುದರಲ್ಲಿ ನಿರತರಾಗಿದ್ದಾರೆ. ಹೀಗಾಗಿ ಸರಕಾರಿ ಶಾಲಾ, ಕಾಲೇಜುಗಳು ಅವನತಿಯತ್ತ ಸಾಗುತ್ತಿವೆ. ಈ ಬಗ್ಗೆ ನಾಡಿನ ಜನತೆಗೆ ಅರಿವಿದ್ದರೂ ವೌನ ವಹಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ನಾಯಕರು ದೇಶದ ಹೊರಗಿರುವ ಕಪ್ಪು ಹಣದ ಕುರಿತು ಮಾತನಾಡುತ್ತಾರೆ. ಆದರೆ, ದೇಶದೊಳಗಿರುವ ಕಪ್ಪು ಹಣದ ಬಗ್ಗೆ ಯಾರೊಬ್ಬರು ಚಕಾರ ಎತ್ತುವುದಿಲ್ಲ. ಇವತ್ತು ಕಪ್ಪು ಹಣದಿಂದಾಗಿ ಖಾಸಗಿ ಕ್ಷೇತ್ರ ವಿಜೃಂಭಿಸುತ್ತಿದೆ. ಈ ಬಗ್ಗೆ ಕಡಿವಾಣ ಹಾಕಬೇಕಾದ ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗವು ಕೂಡ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಶಾಸಕ ರಮೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
 ಕಪ್ಪು ಹಣದಿಂದ ದುಂದುವೆಚ್ಚ ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಿ ಗಲ್ಲಿ, ಗಲ್ಲಿಗಳಲ್ಲಿ ಐಶಾರಾಮಿ ಕಲ್ಯಾಣ ಮಂಟಪಗಳು ತಲೆ ಎತ್ತಿದ್ದು, ಅಲ್ಲೆಲ್ಲಾ ಕಪ್ಪು ಹಣವೆ ಹರಿದಾಡುತ್ತಿದೆ. ಒಂದು ಮದುವೆಗೆ ಕೋಟ್ಯಂತರ ರೂ.ಖರ್ಚು ಮಾಡಲಾಗುತ್ತಿದೆ. ಇದರ ಹಣದ ಲೆಕ್ಕಾಚಾರವನ್ನು ಪ್ರಶ್ನಿಸುವವರೆ ಇಲ್ಲವಾಗಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜನತೆಗೆ ಒಳ್ಳೆಯ ಸಂದೇಶಗಳನ್ನು ನೀಡಬೇಕಾದ ಪತ್ರಿಕಾರಂಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಪ್ಪತ್ತು ವರ್ಷಗಳ ಹಿಂದೆ ಪತ್ರಕರ್ತರು ನಡೆದು ಬರುತ್ತಿದ್ದರೆ, ಅವರ ಎದರಿಗೆ ಕುಳಿತುಕೊಳ್ಳುತ್ತಿರಲಿಲ್ಲ. ಆದರೆ, ಈಗಿನ ಪತ್ರಕರ್ತರು ಐಶಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದಾರೆ. ಅವರಿಗೆ ರಾಜಕಿಯ, ಸಾಮಾಜಿಕ ಕ್ಷೇತ್ರದ ಬಗ್ಗೆ ಕನಿಷ್ಠ ಆಸಕ್ತಿಯೂ ಇಲ್ಲವೆಂದು ಅವರು ವ್ಯಂಗ್ಯವಾಡಿದರು.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಪ್ರಸ್ತುತ ನಮ್ಮ ಸಮಾಜದಲ್ಲಿ ಹಲವು ಮಂದಿಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್‌ಗೆ ಆಯ್ಕೆಯಾಗುವಂತಹ ಆರ್ಹತೆಯಿದ್ದರೂ ಅವಕಾಶ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿ ಬದಲಾವಣೆಗೊಂಡಾಗ ಮಾತ್ರ ರಾಜ್ಯದಲ್ಲಿ ಜನಪರ ಕಾನೂನುಗಳು ಬರಲು ಸಾಧ್ಯವೆಂದು ತಿಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು 2 ವರ್ಷ ಬಾಕಿಯಿದ್ದು, ಪರ್ಯಾಯ ಶಕ್ತಿಗಳಿಗೆ ಒಳ್ಳೆಯ ಅವಕಾಶವಿದೆ. ಹೀಗಾಗಿ ಪರ್ಯಾಯ ಶಕ್ತಿಗಳು ಒಂದು ವೇದಿಕೆಗೆ ಬಂದು, ಕಾರ್ಯಪ್ರವೃತ್ತರಾದರೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News