ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ : ಸೋರಿಕೆಯಲ್ಲಿ ಉದ್ಯಮಿ ನಾರಾಯಣ್?
ಬೆಂಗಳೂರು, ಮೇ 23: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣದಲ್ಲಿ ಪ್ರಭಾವಿ ಉದ್ಯಮಿ ನಾರಾಯಣ್ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಸಿಐಡಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪ್ರಮುಖ ರೂವಾರಿ ಕಿರಣ್ ಯಾನೆ ಕುಮಾರ್‌ಸ್ವಾಮಿ ಸಿಐಡಿ ಬಂಧನದಲ್ಲಿದ್ದು, ಈತ ವಿಚಾರಣೆ ಸಂದರ್ಭದಲ್ಲಿ ಬೆಂಗಳೂರಿನ ಸದಾಶಿವನಗರದ 18 ಕ್ರಾಸ್‌ನಲ್ಲಿರುವ ಪ್ರಭಾವಿ ಉದ್ಯಮಿ ನಾರಾಯಣ್ ಎಂಬಾತ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎಂಬ ಸ್ಫೋಟಕ ಮಾಹಿತಿಯನ್ನು ಹೇಳಿದ್ದಾನೆ ಎಂಬ ಮಾತು ಕೇಳಿ ಬಂದಿದೆ.
ನಾರಾಯಣ್ ಪುತ್ರ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಹೀಗಾಗಿ, ಆತನಿಗೆ 13 ಲಕ್ಷ ರೂ.ಗಳಿಗೆ ಪ್ರಶ್ನೆಪತ್ರಿಕೆ ನೀಡುವುದಾಗಿ ಒಪ್ಪಂದ ಮಾಡಿಕೊಂಡು ರಸಾಯನಶಾಸ್ತ್ರ ಸೇರಿ ಪ್ರಮುಖ ಮೂರು ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ನೀಡಿದ್ದೇನೆ. ಅಲ್ಲದೆ, ಪ್ರಶ್ನೆಪತ್ರಿಕೆಗಳಿಗೆ ಸರಿಯಾದ ಉತ್ತರ ಬರೆಯಲು ಉಪನ್ಯಾಸಕರು ಸಹಾಯ ಮಾಡಿದ್ದಾರೆ. ಸೋರಿಕೆಯ ಬಗ್ಗೆ ನಾರಾಯಣ್ ನಿವಾಸದಲ್ಲಿಯೇ ಚರ್ಚೆಯಾಗುತಿತ್ತು ಎಂಬ ಆತಂಕದ ಮಾಹಿತಿಯನ್ನು ವಿಚಾರಣೆಯಲ್ಲಿ ಆರೋಪಿ ಕಿರಣ್ ಹೇಳಿದ್ದಾನೆ ಎಂದು ಗೊತ್ತಾಗಿದೆ.
ತಲೆಮರೆಸಿಕೊಂಡಿರುವ ಉದ್ಯಮಿ: ಸೋರಿಕೆ ಪ್ರಕರಣ ಹೊರ ಬಂದಿರುವ ಹಿನ್ನೆಲೆಯಲ್ಲಿ ಉದ್ಯಮಿ ನಾರಾಯಣ್ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಈತನ ಸಂಬಂಧಿಗಳೂ ಮನೆಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋಕಾ ಬೇಡ: ಸೋರಿಕೆ ಪ್ರಕರಣ ಸಂಬಂಧ ತನ್ನ ಮೇಲೆ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಕೋಕಾ) ಅಡಿ ದೂರು ದಾಖಲಿಸಬಾರದೆಂದು ಮನವಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಈತನ ಬಂಧನಕ್ಕೆ ಸಿಐಡಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.