×
Ad

ಕೊಳದ ಮಠದ ಸ್ವಾಮೀಜಿ ಹೇಳಿಕೆ : ಪ್ರಕರಣ ದಾಖಲಿಸಲು ಆಗ್ರಹ

Update: 2016-05-23 19:39 IST

ಬೆಂಗಳೂರು, ಮೇ 23: ಜ್ಞಾನಪೀಠ ಪುರಸ್ಕೃತ, ದೇಶದ ಹಿರಿಯ ಚಿಂತಕ ಡಾ. ಯು. ಆರ್. ಅನಂತಮೂರ್ತಿ ಅವರನ್ನು ಗುಂಡಿಟ್ಟು ಕೊಲ್ಲಬೇಕು ಎನ್ನುವ ಕೊಳದಮಠದ ಸ್ವಾಮೀಜಿ ಶಾಂತವೀರ ಅವರ ಹೇಳಿಕೆಗೆ ನಾಡಿನ ಗಣ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಸ್ವಯಂ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಇದು ನಾಡಿನ ಉಳಿದ ಸಾಹಿತಿಗಳು, ಚಿಂತಕರಿಗೆ, ಪ್ರಗತಿಪರರಿಗೆ ಅವರು ನೀಡಿರುವ ಪರೋಕ್ಷ ಬೆದರಿಕೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ. ಕೊಳದಮಠ ಸ್ವಾಮಿ ಹೇಳಿಕೆಗೆ ಕೆಲವು ಗಣ್ಯರ ಪ್ರತಿಕ್ರಿಯೆಗಳು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿ ಅವರನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು ಎಂದು ಕೊಳದಮಠದ ಸ್ವಾಮೀಜಿ ನೀಡಿರುವ ಹೇಳಿಕೆಗೆ ನನ್ನ ಆಕ್ಷೇಪವಿದೆ. ಅನಂತಮೂರ್ತಿ ನಮ್ಮಾಂದಿಗಿಲ್ಲ. ಆದರೆ, ಅವರ ಸಾಹಿತ್ಯ ಇನ್ನೂ ಜೀವಂತವಾಗಿದೆ. ಅವರಿಲ್ಲದಂತಹ ಸಂದರ್ಭದಲ್ಲಿ ಸ್ವಾಮೀಜಿ ಯಾಕೆ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ.

-ಉಮಾಶ್ರೀ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವುದು ಯಾವ ಆಧಾರದಿಂದ ಎಂದು ನಿರ್ಧರಿಸುವವರು ಸಾಹಿತಿಗಳೇ ಹೊರತು ಮಠಾಧೀಶರಲ್ಲ. ಆದ್ದರಿಂದ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಾಗದ್ದಿಲ್ಲ. ಅನಂತಮೂರ್ತಿಯವರನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು ಎನ್ನುವ ಮನಸ್ಥಿತಿಯೇ ಮಠಾಧೀಶರ ಮನಸ್ಥಿತಿಯಲ್ಲ. ಸಂತತನವಿರಬೇಕಾಗಿದ್ದವರ ಬಾಯಲ್ಲಿ ಕ್ರೌರ್ಯದ ಮಾತುಗಳು ಬರುತ್ತಿರುವುದು ಖಂಡಿತ ಒಪ್ಪಲಾಗದು.

-ಡಾ.ಎಲ್.ಹನುಮಂತಯ್ಯ,ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಗುಂಡಿಕ್ಕಿ ಕೊಲ್ಲಬೇಕೆಂಬ ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆ ಸಾಮಾನ್ಯನಿಗೆ ತಕ್ಕುದಲ್ಲ, ಇನ್ನು ಸ್ವಾಮೀಜಿಗೆ ತಕ್ಕದ್ದಂತೂ ಅಲ್ಲವೆ ಅಲ್ಲ. ಇದು ಅವರ ಗೌರವಕ್ಕೆ ಚ್ಯುತಿ. ಭಿನ್ನಾಭಿಪ್ರಾಯಗಳಿಗೆ ಹೀಗೆ ಪ್ರತಿಕ್ರಿಯೆ ನೀಡುವುದು ಅನಾರೋಗ್ಯಕರ ಲಕ್ಷಣ. ಇಂತಹವರು ಸಮಾಜಕ್ಕೆ ಎನು ಬೋಧನೆ ಮಾಡುತ್ತಾರೆಂಬುದು ಯಕ್ಷ ಪ್ರಶ್ನೆ. ಅನಂತಮೂರ್ತಿಯವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿದ್ದು, ಜ್ಞಾನಪೀಠ ಸಮಿತಿಯೇ ಹೊರತು ರಾಜಕೀಯ ನಾಯಕರಲ್ಲ. ಕನ್ನಡ ಲೇಖಕರೊಬ್ಬರಿಗೆ ಜ್ಞಾನಪೀಠ ಬಂದಿದೆ ಎಂದು ನಾವೆಲ್ಲ ಸಂಭ್ರಮಪಟ್ಟಿದ್ದೇವೆ.

-ಪ್ರೊ.ಬರಗೂರು ರಾಮಚಂದ್ರಪ್ಪ ಹಿರಿಯ ಲೇಖಕರು

ಅನಂತಮೂರ್ತಿ ಜೀವಂತ ಇರುವಾಗ ಅವರನ್ನು ಸೈದ್ಧಾಂತಿಕವಾಗಿ ಎದುರಿಸಲಾದ ಕೊಳಕು ಮನಸ್ಸಿನ ವ್ಯಕ್ತಿಗಳು ಮಾತ್ರವೆ ಹೀಗೆ ಅಸಹ್ಯವಾಗಿ ಮಾತನಾಡಲು ಸಾಧ್ಯ. ಒಂದು ಮಠಕ್ಕಷ್ಟೇ ಸೀಮಿತವಾಗಿರುವ ಸ್ವಾಮೀಜಿಗೆ ವಿಶ್ವವಿಖ್ಯಾತರಾದ ಅನಂತಮೂರ್ತಿಯವರು ಹೇಗೆ ಅರ್ಥವಾಗಲು ಸಾಧ್ಯ. ವೈರುಧ್ಯಗಳ ಟೀಕೆ, ವೈಚಾರಿಕ ಪ್ರತಿಪಾದನೆ ಅಪರಾಧವೇನಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ. ಕೊಳದ ಮಠದ ಸ್ವಾಮೀಜಿ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ.

-ಬಸವರಾಜ ದೇವರು ಸ್ವಾಮೀಜಿರೇವಣ್ಣ ಸಿದ್ದೇಶ್ವರ ಮಠದ ಧಾರವಾಡ

ಒಬ್ಬ ಸ್ವಾಮೀಜಿಯ ಬಾಯಲ್ಲಿ ಎಂಥ ಮಾತು ಬರಬಾರದೋ ಅಂತ ಮಾತುಗಳು ಬಂದಿವೆ. ಇಂತಹ ವ್ಯಕ್ತಿಗಳಿಗೆ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ.

-ಪ್ರೊ.ಕೆ.ಮರುಳಸಿದ್ದಪ್ಪ,ಸಂಸ್ಕೃತಿ ಚಿಂತಕರು

ಕೊಳದ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿಕೆಯನ್ನು ಗಮನಿಸಿಲ್ಲ. ಅದೇ ರೀತಿಯಲ್ಲಿ ಡಾ.ಯು.ಆರ್.ಅನಂತಮೂರ್ತಿಯವರ ಹೇಳಿಕೆಗಳನ್ನೂ ತಾನು ನೋಡಿಲ್ಲ. ಹೀಗಾಗಿ ಅವರಿಬ್ಬರ ಹೇಳಿಕೆಗಳಿಗೆ ಈ ಸಂದರ್ಭದಲ್ಲಿ ತಾನು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ.

-ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News