×
Ad

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ

Update: 2016-05-23 22:15 IST

 ಕಾರವಾರ, ಮೇ 23: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನಾ ಕೇಂದ್ರಗಳಿದ್ದರೂ ವಿದ್ಯುತ್ ಸಮಸ್ಯೆ ಎದುರಾಗಿದೆ. ಪದೆ ಪದೇ ವಿದ್ಯುತ್ ಕಡಿತದಿಂದಾಗಿ ಜನರು ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

ಕಳೆದ ಬಾರಿಯ ಘಟನೆಗಳಿಂದ ಪಾಠ ಕಲಿಯದ ಹೆಸ್ಕಾಂ ಇನ್ನೂ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ಕಳೆದ ಸಲ ಕಾರವಾರ ತಾಲೂಕಿನ ಸಿದ್ಧರ ಹಾಗೂ ಸದಾಶಿವಗಡ ಚಿತ್ತಾಕುಲ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತದಿಂದ ರೊಚ್ಚಿಗೆದ್ದ ಜನರು ವಿದ್ಯುತ್ ಕೇಂದ್ರಗಳ ಮೇಲೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಇಲ್ಲಿ ವಾರಗಟ್ಟಲೆ ವಿದ್ಯುತ್ ಕಡಿತಗೊಳಿಸಿದ ಪರಿಣಾಮ ಮಕ್ಕಳ ವಿದ್ಯಾಭ್ಯಾಸ, ಐಸ್‌ಕ್ರೀಮ್ ವ್ಯಾಪಾರ, ವಿವಿಧ ರೀತಿಯ ಸಣ್ಣ ಮತ್ತು ಮಧ್ಯಮ, ಗುಡಿ ಕೈಗಾರಿಕೆಗಳ ಮೇಲೆ ತೀವ್ರತರದ ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು. ಇದರಿಂದ ರೋಸಿ ಹೋಗಿದ್ದ ಜನರು ಸದಾಶಿವಗಡ್‌ನಲ್ಲಿ ತಮಟೆ ಬಾರಿಸಿ ಮೆರವಣಿಗೆ ಮಾಡಿದ್ದರು. ಅದೇ ರೀತಿ ಸಿದ್ದರದಲ್ಲಿ ವಿದ್ಯುತ್ ನಿಯಂತ್ರಣ ಕೇಂದ್ರದ ಮೇಲೆ ಸ್ಥಳೀಯರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಇದಕ್ಕೆ ಪ್ರತಿಯಾಗಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟದ ಆರೋಪದಡಿಯಲ್ಲಿ ಸ್ಥಳೀಯರ ಮೇಲೆ ಹೆಸ್ಕಾಂನವರು ಪೊಲೀಸ್ ಪ್ರಕರಣ ದಾಖಲಿಸಿದ್ದರು. ತಲೆಕೆಡಿಸಿಕೊಳ್ಳದ ಹೆಸ್ಕಾಂ:

ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದೆ. ಆದರೆ ಕಳೆದ ವರ್ಷ ಗಾಳಿ, ಮಳೆಗಳಿಂದ ಹಾನಿಯಾಗಿ ತೊಂದರೆ ಅನುಭವಿಸಿದರ ಬಗ್ಗೆ ಹೆಸ್ಕಾಂ ಲಕ್ಷವಹಿಸಿದಂತಿಲ್ಲ. ನಗರದಲ್ಲಿ ಸಾವಿರಾರು ಮರ ಗಿಡಗಳ ರೆಂಬೆ, ಕೊಂಬೆಗಳು ವಿದ್ಯುತ್ ಕಂಬಗಳಿಗೆ ತಾಗಿಕೊಂಡಿದ್ದು, ಅವುಗಳನ್ನು ತೆರವುಗೊಳಿಸಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕಂಬಗಳು ಮುರಿದು ಬೀಳುವ ಸ್ಥಿತಿ ತಲುಪಿವೆ. ಆದರೆ ಇದಾವುದರ ಬಗ್ಗೆಯೂ ಹೆಸ್ಕಾಂನವರು ತಲೆಕೆಡಿಸಿಕೊಂಡಿಲ್ಲ. ಸಿಬ್ಬಂದಿ ಕೊರತೆ:

ಜಿಲ್ಲೆಯು ವಿದ್ಯುತ್ ಉತ್ಪಾದನೆಯಲ್ಲಿ ಹಾಗೂ ವಿದ್ಯುತ್ ಶುಲ್ಕ ಪಾವತಿಯಲ್ಲಿ ಇತರೆ ಜಿಲ್ಲೆಗೆ ಹೋಲಿಸಿದರೆ ಮುಂಚೂಣಿಯಲ್ಲಿದೆ. ಅದಕ್ಕಾಗಿ ಜಿಲ್ಲೆಯ ಗ್ರಾಹಕರು ಹೆಸ್ಕಾಂನಿಂದ ವಿಶೇಷ ರಿಯಾಯಿತಿ ಹಾಗೂ ಗುಣಮಟ್ಟದ ಸೇವೆಯ ನಿರೀಕ್ಷೆಯಲ್ಲಿದ್ದರು. ಆದರೆ ಶೇ.46 ಸಿಬ್ಬಂದಿ ಕೊರತೆಯಿಂದ ಹಾಗೂ ವಿದ್ಯುತ್ ಪರಿಕರಗಳ ಅಭಾವದಿಂದ ಬಳಲುತ್ತಿರುವ ಹೆಸ್ಕಾಂ ಜಿಲ್ಲೆಯ ಗ್ರಾಹಕರ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಹೆಸ್ಕಾಂನ ಸ್ಥಿತಿಗತಿ:

17ನೆ ಪ್ರಸಕ್ತ ಸಾಲಿನಲ್ಲಿ ಹೆಸ್ಕಾಂಗೆ ಪ್ರಾರಂಭದಲ್ಲಿಯೇ ಒಟ್ಟು 58.60 ಲಕ್ಷ ರೂ.ಹಾನಿ ಸಂಭವಿಸಿದೆ. ಕಳೆದ ವರ್ಷ 2015-16ನೆ ಸಾಲಿನಲ್ಲಿ 139 ಲಕ್ಷ ರೂ. ಹಾನಿ ಸಂಭವಿಸಿದೆ. ಪ್ರಸಕ್ತ ವರ್ಷ ಐದು ತಾಲೂಕುಗಳ ವಿಭಾಗದಲ್ಲಿ ಒಟ್ಟು ಏಳು ಟ್ರಾನ್ಸ್‌ಫಾರ್ಮರ್‌ಗಳು, ಆರ್‌ಸಿಸಿ, ಪಿಎಸ್‌ಸಿ ಕ್ವಾಲಿಟಿಯ ಹೈಟೆನ್ಷನ್ ಮತ್ತು ಲೋಟೆನ್ಷನ್ 93 ಕಂಬಗಳು ಹಾಳಾಗಿದ್ದು,ದುರಸ್ತಿ ಕಾರ್ಯ ಮುಂದುವರಿದಿದೆ. ಈ ವಿಭಾಗದಲ್ಲಿ ಲೋಟೆನ್ಶನ್‌ನ 6 ಸಾವಿರ ಕಿ.ಮೀ. ಲೈನ್‌ನಲ್ಲಿ ಸುಮಾರು 400 ಕಿ.ಮೀ.ಲೈನ್‌ಗಳನ್ನು ಬದಲಾವಣೆ ಮಾಡಲಾಗಿದೆ. ಅದೇ ರೀತಿ ಹೈ ಟೆನ್ಶನ್‌ನ 2.300 ಕಿ.ಮೀ. ಲೈನ್‌ನಲ್ಲಿ ಸುಮಾರು 10 ಕಿ.ಮೀ. ಲೈನ್ ಮಾತ್ರ ಬದಲಾಯಿಸಿ ಹೊಸ ಲೈನ್ ಅಳವಡಿಸಲಾಗಿದೆ. ಐದು ತಾಲೂಕುಗಳ ವಿಭಾಗದಲ್ಲಿ 862 ಸಿಬ್ಬಂದಿಯ ಆವಶ್ಯಕತೆ ಇದೆ. ಸದ್ಯ 481 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 381 ಸಿಬ್ಬಂದಿಯ ಕೊರತೆ ಇದೆ ಎಂದು ಹೆಸ್ಕಾಂನ ದಾಖಲೆಗಳು ತಿಳಿಸುತ್ತವೆ.

ಕಳಪೆ ಗುಣಮಟ್ಟದ ಪರಿಕರಗಳೇ?:

 ಜಿಲ್ಲೆಯಲ್ಲಿ ವಾರದ ಬಹುತೇಕ ದಿನಗಳಲ್ಲಿ ವಿದ್ಯುತ್‌ನ್ನು ಮುನ್ಸೂಚನೆ ಇಲ್ಲದೆ ತೆಗೆಯಲಾಗುತ್ತಿದೆ. ಈ ಬಗ್ಗೆ ಹೆಸ್ಕಾಂನವರನ್ನು ವಿಚಾರಿಸಿದರೆ ದುರಸ್ತಿಯ ನೆಪವೊಡ್ಡುತ್ತಿದ್ದಾರೆ. ಆದರೆ ಎಷ್ಟೇ ದುರಸ್ತಿ ಮಾಡಿದರೂ ಕೂಡ ಮಳೆಗಾಲದಲ್ಲಿ ವಿದ್ಯುತ್ ಕಡಿತ ತಪ್ಪುತ್ತಿಲ್ಲ. ಅಲ್ಲದೆ ವರ್ಷಪೂರ್ತಿ ದುರಸ್ತಿ ಕಾರ್ಯದಲ್ಲಿ ಮುಳುಗಿರುವ ಹೆಸ್ಕಾಂ ಸರಬರಾಜು ಆಗುತ್ತಿರುವ ವಿದ್ಯುತ್ ಪರಿಕರಗಳ ಬಗ್ಗೆ ಗುಮಾನಿ ಏಳುವಂತಾಗಿದೆ. ಸರಬರಾಜು ಕಂಪೆನಿಗಳೊಂದಿಗೆ ಅಧಿಕಾರಿಗಳು ರಾಜಿ ಮಾಡಿಕೊಂಡು ಕಳಪೆ ಗುಣಮಟ್ಟದ ಪರಿಕರಗಳು ಸರಬರಾಜು ಮಾಡಿಕೊಳ್ಳುತ್ತಿರುವುದರಿಂದ ಬೇಗ ಹಾಳಾಗುತ್ತಿವೆ ಎನ್ನುವ ಆರೋಪಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News