×
Ad

ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ

Update: 2016-05-23 22:21 IST

ಶಿವಮೊಗ್ಗ, ಮೇ 23: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆದಿರುವ ಕೆರೆ ಒತ್ತುವರಿ ತೆರವುಗೊಳಿಸಿ, ಸಂರಕ್ಷಿಸಲು ಕೊನೆಗೂ ಜಿಲ್ಲಾಡಳಿತ ಮುಂದಾಗಿದೆ. ರವಿವಾರ ನಗರದ ಆಲ್ಕೋಳ ಬಡಾವಣೆಯಲ್ಲಿ ಒತ್ತುವರಿಯಾಗಿದ್ದ ಕೆರೆಯ ಪ್ರದೇಶವನ್ನು ತೆರವುಗೊಳಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿತು. ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ತೆರವು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಾತನಾಡಿ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಎಂಟು ಕೆರೆಗಳ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ ವಿವಿಧೆಡೆ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಆಕ್ರೋಶ ವ್ಯಕ್ತವಾಗಿತ್ತು

: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆದಿರುವ ಕೆರೆ ಒತ್ತುವರಿ ತೆರವುಗೊಳಿಸುವಲ್ಲಿ ಹಾಗೂ ಕೆರೆ ಸಂರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆ ತಳೆದಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಕೆರೆ ಸಂರಕ್ಷಣಾ ಸಮಿತಿಯು ಸಭೆಗಳನ್ನು ಮಾತ್ರ ನಡೆಸುತ್ತಿದ್ದು, ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕೈಗೊಂಡ ನಿರ್ಣಯಗಳ ಅನುಷ್ಠಾನ ಮಾಡುತ್ತಿಲ್ಲ ಎಂದು ಪ್ರಗತಿಪರ ಸಂಘಟನೆಗಳು ದೂರಿದ್ದವು. ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಇತ್ತೀಚೆಗೆ ಅಣ್ಣಾ ಹಝಾರೆ ಹೋರಾಟ ಸಮಿತಿ, ಆಮ್ ಆದ್ಮಿ ಪಕ್ಷ, ರಾಜ್ಯ ರೈತ ಸಂಘಗಳು ಡಿ.ಸಿ. ಕಚೇರಿ ಆವರಣದಲ್ಲಿ ನಾಲ್ಕು ದಿನಗಳ ಪ್ರತಿಭಟನೆ ನಡೆಸಿದ್ದವು. ಆದರೆ, ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರ ಅಹವಾಲು ಆಲಿಸಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಡಿ.ಸಿ.ಗೆ ಅವರ ಕೊಠಡಿಯಲ್ಲಿಯೇ ಘೇರಾವ್ ಮಾಡಲು ಮುಂದಾಗಿ ಧಿಕ್ಕಾರದ ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದಿದ್ದರು. ಕೆರೆ ಸಂರಕ್ಷಣೆಯ ಬಗ್ಗೆ ಮನವಿ ಸ್ವೀಕರಿಸದ ಜಿಲ್ಲಾಧಿಕಾರಿಯು, ಪೊಲೀಸರ ಮೂಲಕ ತಮ್ಮನ್ನು ಬಂಧಿಸಿದ ಕ್ರಮಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಡಳಿತದ ವಿರುದ್ಧ ನಿರಂತರ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು. ಎಚ್ಚೆತ್ತ ಆಡಳಿತ: ಪ್ರಗತಿಪರ ಸಂಘಟನೆಗಳ ಮುಖಂಡರ ಬಂಧನದ ನಂತರ ಕೆರೆ ಸಂರಕ್ಷಣೆಯ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ನಗರ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ನಾಗರಿಕರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಕೊನೆಗೂ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಆಲ್ಕೋಳ ಬಡಾವಣೆಯಲ್ಲಿ ನಡೆದಿರುವ ಕೆರೆ ಒತ್ತುವರಿ ತೆರವುಗೊಳಿಸಿದೆ. ಈ ಮೂಲಕ ಭೂಗಳ್ಳರಲ್ಲಿ ನಡುಕ ಹುಟ್ಟಿಸಿದೆ. ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಟ್ಟಾರೆ ‘ಕೆಟ್ಟ ಮೇಲೆ ಬುದ್ದಿ ಬಂತು’ ಎಂಬ ಗಾದೆ ಮಾತಿನಂತೆ, ನಗರ ವ್ಯಾಪ್ತಿಯಲ್ಲಾಗಿರುವ ಕೆರೆಗಳ ಒತ್ತುವರಿ ತೆರವುಗೊಳಿಸಬೇಕೆಂದು ನಾಗರಿಕ ವಲಯದಿಂದ ವ್ಯಕ್ತವಾದ ಒತ್ತಡದ ನಂತರ ಜಿಲ್ಲಾಡಳಿತ ಇತ್ತ ಚಿತ್ತ ಹರಿಸಿದೆ. ಈ ಕಾರ್ಯಾಚರಣೆ ಎಷ್ಟು ದಿನ ನಡೆಯಲಿದೆ? ಇದರ ಪರಿಣಾಮವೇನು? ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News