ಸ್ಮಾರ್ಟ್‌ಸಿಟಿ ಬದಲು ಸ್ಮಾರ್ಟ್ ಹಳ್ಳಿ ನಿರ್ಮಿಸಿ: ಚಂದ್ರಶೇಖರ ಕಂಬಾರ
ಕಡೂರು, ಮೇ 23: ಸ್ಮಾರ್ಟ್‌ಸಿಟಿ ನಿರ್ಮಾಣ ಮಾಡಿ ಕಾರ್ಪೊರೇಟ್ ವಲಯಕ್ಕೆ ಹೆಚ್ಚು ಅನುಕೂಲ ಮಾಡಿಕೊಡುವ ಬದಲು ಪ್ರಧಾನಿ ಮೋದಿ ಅವರು, ಸ್ಮಾರ್ಟ್ ಹಳ್ಳಿಗಳನ್ನು ನಿರ್ಮಿಸಲು ಮುಂದಾಗಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು, ಕುಪ್ಪಳ್ಳಿಯಿಂದ ಬೆಂಗಳೂರಿಗೆ ಹೋಗುವ ಮಾರ್ಗಮಧ್ಯೆ ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಧಾನಿ ಮೋದಿ ಸ್ಮಾರ್ಟ್‌ಸಿಟಿ ನಿರ್ಮಾಣ ಮಾಡಲು ಹೋಗುತ್ತಿದ್ದಾರೆ. ಅದರಿಂದ ಕಾರ್ಪೊರೇಟ್ ವಲಯ ಮಾತ್ರ ಉದ್ದಾರವಾಗುತ್ತದೆ. ಅವರು, ಸ್ಮಾರ್ಟ್‌ವಿಲೇಜ್ ನಿರ್ಮಾಣ ಮಾಡಬೇಕು. ಅಲ್ಲಿನ ಪಾರಂಪರಿಕ ಸೌಂದರ್ಯವನ್ನುಳಿಸಿಕೊಂಡು ಸಮಾನತೆಯ ಸೌಲಭ್ಯ ನೀಡಬೇಕು. ಪ್ರತೀ ಮನೆಯಲ್ಲಿಯೂ ಶೌಚಾಲಯ,ಸಾಮೂಹಿಕ ಸ್ಮಶಾನ ಮುಂತಾದವುಗಳನ್ನು ಮಾಡಬೇಕು ಎಂದರು. ಕನ್ನಡ ಭಾಷೆ ಉಳಿಸಲು ಸಾಹಿತಿ ಚಂದ್ರಶೇಖರ ಪಾಟೀಲರು ಆರಂಭಿಸಿರುವ ಚಳವಳಿಗೆ ಪ್ರತಿಯೊಬ್ಬರೂ ಬೆಂಬಲಿಸಬೇಕು. ಸಾಹಿತಿಗಳು, ಕನ್ನಡ ಪರ ಸಂಘಟನೆಗಳು ಅವರ ವಿಚಾರಧಾರೆಯನ್ನು ಅನುಮೋದಿಸಬೇಕು. ಈ ಚಳವಳಿಯಲ್ಲಿ ಎಲ್ಲರೂ ನಾನೇ ಮುಂದಾಳು ಎಂದು ಹೋಗಿ ಅದನ್ನು ಕೆಡಿಸುವ ಅಪಾಯವಿದೆ. ಹಾಗಾಗಿ ಎಲ್ಲರೂ ಅವರನ್ನು ಬೆಂಬಲಿಸಬೇಕು. ಸಂಸತ್ತಿನಲ್ಲಿ ಈ ಬಗ್ಗೆ ತೀರ್ಮಾನವಾದರೆ ದೇಶೀಯ ಭಾಷೆಗಳ ಉಳಿವು ಸಾಧ್ಯವಿದೆ. ಅದಕ್ಕೆ ನನ್ನ ಸಂಪೂರ್ಣ ಸಹಮತವಿದೆ ಎಂದರು.
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ಕೇಳಿದಾಗ ಸದ್ಯಕ್ಕೆ ಕನ್ನಡ ಉಳಿಯುವುದೇ ಅನುಮಾನವಾಗಿರುವ ಪರಿಸ್ಥಿತಿ ಉಂಟಾಗಿದೆ. ಮೊದಲು ಅದು ಉಳಿಯಲಿ. ನಂತರ ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ಯೋಚನೆ ಎಂದು ವಿಷಾದಭರಿತ ಧ್ವನಿಯಲ್ಲಿ ನುಡಿದ ಕಂಬಾರರು, ಮೈಸೂರಿನ ಸಾಹಿತಿ ಭಗವಾನ್ ಅವರು, ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ತೊಂದರೆ ಏನಿದೆ? ಕನ್ನಡದ ಪರ ವಿಧಾನಸಭೆಯಲ್ಲಿ ಗಟ್ಟಿಯಾಗಿ ಮಾತನಾಡಲು ಒಬ್ಬರು ಇರಬೇಕು. ಭಗವಾನ್ ಅವರ ಕನ್ನಡ ಭಾಷಾ ಪ್ರೇಮ ಮತ್ತು ಬದ್ಧ್ದತೆ ಬಗ್ಗೆ ಎರಡು ಮಾತಿಲ್ಲ. ಇನ್ನೂ ಧರ್ಮದ ಬಗ್ಗೆ ಅವರ ವಿಚಾರಧಾರೆ ಅವರ ವೈಯಕ್ತಿಕ. ಅದರ ಬಗ್ಗೆ ಏನೂ ಹೇಳಲಾರೆ ಎಂದರು.
ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಬಗ್ಗೆ ಮಾತನಾಡಿದ ಕಂಬಾರರು, ಕನ್ನಡ ಭಾಷೆ ಉಳಿಯಲೇಬೇಕು. ಅದಕ್ಕಾಗಿ ಈ ಕಾಲಘಟ್ಟದಲ್ಲಿ ಮತ್ತೊಂದು ಗೋಕಾಕ್ ಮಾದರಿ ಚಳವಳಿಯ ಅಗತ್ಯವಿದೆ. 10 ನೆ ತರಗತಿಯ ತನಕ ಶಿಕ್ಷಣ ರಾಷ್ಟ್ರೀಕರಣವಾಗಬೇಕು ಹಾಗೂ ಏಕರೂಪದ ಶಿಕ್ಷಣ ಜಾರಿಯಾಗಬೇಕು ಎಂದರು.