×
Ad

ನಿರ್ಣಯಗಳಿಗಷ್ಟೇ ಸೀಮಿತವಾದ ನಗರಸಭೆಯ ಸಾಮಾನ್ಯ ಸಭೆ

Update: 2016-05-23 22:27 IST

ಮಡಿಕೇರಿ, ಮೇ 23: ಹಳೆಯ ಸಮಸ್ಯೆಗಳ ಬಗ್ಗೆಯೇ ಮತ್ತೆ ಮತ್ತೆ ಚರ್ಚಿಸುವ ಮೂಲಕ ನಿರ್ಣಯಗಳಿಗಷ್ಟೇ ಸೀಮಿತವಾಗುತ್ತಿರುವ ನಗರಸಭೆಯ ಸಾಮಾನ್ಯ ಸಭೆ ಶೂನ್ಯ ಪರಿಹಾರದ ಹಾದಿಯಲ್ಲೇ ಸಾಗಿದೆ. ಸೋಮವಾರ ನಡೆದ ಸಭೆ ಕೂಡ ಅರ್ಥಹೀನವೆನಿಸಿತು.

ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ ಅಧ್ಯಕ್ಷತೆಯಲ್ಲಿ ನಗರಸಭೆಯ ಸಾಮಾನ್ಯ ಸಭೆ ನಡೆಯಿತು. ಪ್ರತಿ ಸಭೆಯಂತೆ ಈ ಸಭೆಯಲ್ಲಿ ಕೂಡ ನೂತನ ಖಾಸಗಿ ಬಸ್ ನಿಲ್ದಾಣದ ಯೋಜನೆ, ಹೈಟೆಕ್ ಮಾರುಕಟ್ಟೆ ಕಾಮಗಾರಿ, ಮಹದೇವಪೇಟೆ ರಸ್ತೆ ಅಗಲೀಕರಣ, ಪಾರ್ಕಿಂಗ್ ಅವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ, ಜಲಮೂಲಗಳಿಗೆ ಕಂಟಕ, ಕಂದಾಯ ವಸೂಲಿಯಲ್ಲಿ ಹಿನ್ನಡೆ, ಫಾರಂ ಸಂಖ್ಯೆ 3ರ ಗೊಂದಲ, ನಗರಸಭೆ ಅಂಗಡಿ ಮಳಿಗೆಗಳ ಬಾಡಿಗೆ ವಸೂಲಿಯಲ್ಲಿ ನಡೆದ ಅವ್ಯವಹಾರ ಸೇರಿದಂತೆ ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಆದರೆ ಯಾವುದೇ ಸಮಸ್ಯೆಗಳಿಗೆ ನಿಖರವಾದ ಪರಿಹಾರವನ್ನು ಸೂಚಿಸುವಲ್ಲಿ ಸಭೆ ವಿಫಲವಾಯಿತು. ಈ ಹಿಂದಿನ ಸಭೆಗಳ ನಿರ್ಣಯಗಳೇ ಅನುಷ್ಠಾನಗೊಳ್ಳದೆ ಇರುವ ಬಗ್ಗೆ ಸದಸ್ಯರಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು.

                                             

ಖಾಸಗಿ ಬಸ್ ನಿಲ್ದಾಣದ ಸಾಧಕ ಬಾಧಕ: ಕೃಷಿ ಸಂಶೋಧನಾ ಕೇಂದ್ರದಿಂದ ದೊರೆತಿರುವ ಜಾಗದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾ ಣವಾದರೆ ವಾಹನದಟ್ಟಣೆಯಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಬಿಜೆಪಿ ಸದಸ್ಯ ಉಣ್ಣಿಕೃಷ್ಣನ್ ಸಭೆಯ ಗಮನ ಸೆಳೆದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಬಸ್‌ಗಳ ಓಡಾಟವಿಲ್ಲದೆಯೇ ರಾಜಾಸೀಟು ರಸ್ತೆ ಹಾಗೂ ಎಸ್‌ಬಿಐ ರಸ್ತೆಗಳಲ್ಲಿ ವಾಹನದಟ್ಟಣೆಯಿಂದ ಅಡಚಣೆ ಎದುರಾಗುತ್ತಿದೆ. ಪ್ರತಿದಿನ 93 ಖಾಸಗಿ ಬಸ್‌ಗಳು 173 ಬಾರಿ ನಗರವನ್ನು ಪ್ರವೇಶಿಸುತ್ತವೆ. ವಾಹನದಟ್ಟಣೆಯನ್ನು ನಿಭಾಯಿಸುವ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಉಣ್ಣಿಕೃಷ್ಣನ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ಕೆಎಂಬಿ ಗಣೇಶ್, ಈಗ ಇರುವ ಹಳೆಯ ಖಾಸಗಿ ಬಸ್ ನಿಲ್ದಾಣದ ಜಾಗ ಕೇವಲ 50 ಸೆಂಟ್‌ಗಳಷ್ಟೇ ಇದ್ದು, ಪ್ರಸ್ತುತ ನೂತನ ನಿಲ್ದಾಣಕ್ಕಾಗಿ ಗುರುತಿಸಿರುವ ಜಾಗ 3 ಎಕರೆಯಷ್ಟಿದೆ, ಆದ್ದರಿಂದ ಸಮಸ್ಯೆಗಳು ಉದ್ಭವಿಸುವುದಿಲ್ಲವೆಂದು ಅಭಿಪ್ರಾಯಪಟ್ಟರು. ಸದಸ್ಯ ನಂದಕುಮಾರ್ ಮಾತನಾಡಿ, ಜಲಪ್ರದೇಶಗಳಲ್ಲಿ ಕೆಲವು ಲೇಔಟ್‌ಗಳು ನಿರ್ಮಾಣವಾಗುತ್ತಿದ್ದು, ಇದರಿಂದಲೂ ಜಲಮೂಲ ಗಳಿಗೆ ಕಂಟಕ ಎದುರಾಗಿದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಸದಸ್ಯ ಪಿ.ಡಿ.ಪೊನ್ನಪ್ಪ, ಸದಸ್ಯ ಚುಮ್ಮಿ ದೇವಯ್ಯ ಧ್ವನಿಗೂಡಿಸಿದರು. ಸುದರ್ಶನ ಬಡಾವಣೆಯಲ್ಲಿ ಜಲಮೂಲದ ಸಮೀಪದಲ್ಲೇ ಕಟ್ಟಡ ನಿರ್ಮಾಣಕ್ಕೆ ನಿಯಮ ಬಾಹಿರವಾಗಿ ಅವಕಾಶ ನೀಡಲಾಗಿದೆ ಎಂದು ಸದಸ್ಯ ಉಣ್ಣಿಕೃಷ್ಣನ್ ಆರೋಪಿಸಿದರು.

ನಾಮನಿರ್ದೇಶಿತ ಸದಸ್ಯ ಗಿಲ್ಬರ್ಟ್ ಮಾತನಾಡಿ, ನಗರದ ರೋಷನಾರ ಕರೆಯನ್ನು ಈ ಹಿಂದೆ ಫೀ.ಮಾ.ಕಾರ್ಯಪ್ಪ ಅವರು ದಾನವಾಗಿ ನೀಡಿದ್ದು, ಇದನ್ನು ಅಭಿವೃದ್ಧಿ ಪಡಿಸದಿದ್ದರೆ ವಾಪಸು ಪಡೆಯುವುದಾಗಿ ಕಾರ್ಯಪ್ಪ ಅವರ ಪುತ್ರ ಏರ್‌ಮಾರ್ಷಲ್ ಕೆ.ಸಿ.ಕಾರ್ಯಪ್ಪ ನಗರಸಭೆಗೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ ಎಂದು ಸಭೆಯ ಗಮನ ಸೆಳೆದರು.

ಈ ಸಂದರ್ಭ ಮಾತನಾಡಿದ ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರು ನೀಡಿದ ಸಲಹೆಯಂತೆ ನಗರದಲ್ಲಿ ಐದು ಕೆರೆಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು. ಹಣ ವಸೂಲಿಗಾಗಿ ನಾಮಫಲಕ ಅಳವಡಿಕೆ: ಮಡಿಕೇರಿ ನಗರವ್ಯಾಪ್ತಿಯ ಎಲ್ಲಾ ಆಸ್ತಿ ಪಾಸ್ತಿಗಳನ್ನು ಆನ್ ಲೈನ್ ವ್ಯವಸ್ಥೆಯಡಿ ತರುವುದಕ್ಕೆ ಅನುಕೂಲವಾಗುವಂತೆ, ಮಾಹಿತಿ ಸಂಗ್ರಹ ಮತ್ತು ನಾಮಫಲಕ ಅಳವಡಿಕೆಗೆ ತುಮಕೂರಿನ ಸಂಸ್ಥೆಯೊಂದಕ್ಕೆ ಗುತ್ತಿಗೆಯನ್ನು ನಿಡಲಾಗಿದೆ. ಇದೀಗ ಆ ಸಂಸ್ಥೆ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸದೆ ನಾಮಫಲಕ ಅಳವಡಿಸಿ, ನಗರಭೆೆಯ ಹೆಸರಿನ ಬಿಲ್ ಮೂಲಕ 40 ರೂ. ವಸೂಲಿ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು.

ಸದಸ್ಯ ಉದಯಕುಮಾರ್ ಕೋರಿಕೆಯಂತೆ ಸುಬ್ರಮಣ್ಯ ನಗರ ಬಡಾವಣೆಗೆ ಮಾಜಿ ಸಚಿವ ದಿ.ಎಂ.ಎಂ.ನಾಣಯ್ಯ ಅವರ ಹೆಸರಿಡಲು ಸಭೆ ಅನುಮೋದನೆ ನೀಡಿತು. ಕಾಂಗ್ರೆಸ್ ಸದಸ್ಯ ಎಚ್.ಎಂ.ನಂದಕುಮಾರ್, ಕೆ.ಎಸ್.ರಮೇಶ್, ಪಿ.ಡಿ. ಪೊನ್ನಪ್ಪ, ಉಪಾಧ್ಯಕ್ಷೆ ಲೀಲಾ ಶೇಷಮ್ಮ ಸಭೆಯಲ್ಲಿ ಉಪಸ್ಥಿತರಿದ್ದರು.

ಪರಿಹಾರ ಕಾಣದ ಪಾರ್ಕಿಂಗ್ ವ್ಯವಸ್ಥೆ:

ರಸ್ತೆಗಳನ್ನು ಅಗಲೀಕರಣಗೊಳಿಸಿದಂತೆಲ್ಲ ವಾಹನ ನಿಲುಗಡೆ ಪ್ರದೇಶವಾಗಿ ಮಾರ್ಪಡುತ್ತಿದ್ದು, ಬಹುತೇಕ ಕಟ್ಟಡಗಳು ವಾಹನ ನಿಲುಗಡೆ ವ್ಯವಸ್ಥೆಯನ್ನು ಮಾಡದೆ ನಿಯಮ ಉಲ್ಲಂಘಿಸಿವೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದ ವಾಣಿಜ್ಯ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಚುಮ್ಮಿ ದೇವಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಬಿಲ್ ಕಲೆಕ್ಟರ್‌ನಿಂದ 60 ಲಕ್ಷ ರೂ. ವಸೂಲಿಗೆ ಒತ್ತಾಯ:  ನಗರಸಭೆಯ ಬಿಲ್ ಕಲೆಕ್ಟ್‌ರ್ ಸಜಿತ್ ಕುಮಾರ್ ಮತ್ತು ಸ್ವಾಮಿ ಅವರಿಂದ ನಡೆದ ಅಂದಾಜು 60 ಲಕ್ಷ ರೂ. ಅವ್ಯವಹಾರಕ್ಕೆ ಸಂಬಂಧಿಸಿದ ತನಿಖೆಯ ಬಗ್ಗೆ ಸದಸ್ಯರಿಗೆ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಕೋರಿಕೆ ಸಲ್ಲಿಸಿ ವರದಿಯನ್ನು ಸಭೆಯ ಮುಂದಿಡುವಂತೆ ಸದಸ್ಯ ಅಮಿನ್ ಮೊಹ್ಸೀನ್ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಪಿ.ಡಿ.ಪೊನ್ನಪ್ಪ, ಅವ್ಯವಹಾರ ನಡೆಸಿದವರು ಜಾಮೀನು ಪಡೆದು ಆರಾಮವಾಗಿದ್ದಾರೆ, ತಪ್ಪಿತಸ್ತರ ವಿರುದ್ಧ ಯಾವುದೇ ಶಿಸ್ತಿನ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು.

ನಗರದ ಜನತೆಗೆ ಕಲುಷಿತ ನೀರು ಪೂರೈಕೆ: ಕೆಸರು ಮಿಶ್ರಿತ ನೀರಿನಿಂದಾಗಿ ಜನರು ಆಸ್ಪತ್ರೆಗೆ ಅಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಈ ದುಸ್ಥಿತಿಯನ್ನು ಅರಿತುಕೊಂಡೇ ಸರಕಾರಿ ವೈದ್ಯರು ಖಾಸಗಿ ಕ್ಲಿನಿಕ್‌ಗಳನ್ನು ತೆರೆದು ಕಾಳಜಿ ತೋರುತ್ತಿದ್ದಾರೆ. ಆದರೆ ನಗರಸಭೆಗೆ ಜನರ ಬಗ್ಗೆ ಕಾಳಜಿಯೇ ಇಲ್ಲವೆಂದು ಎಸ್‌ಡಿಪಿಐ ಸದಸ್ಯ ಕೆ.ಜಿ.ಪೀಟರ್ ಸಭೆಯ ಗಮನ ಸೆಳೆದರು. ಇವರ ಮಾತಿಗೆ ಜೆಡಿಎಸ್ ಸದಸ್ಯೆ ಸಂಗೀತ ಪ್ರಸನ್ನ ಹಾಗೂ ಬಿಜೆಪಿ ಸದಸ್ಯೆ ಅನಿತಾ ಪೂವಯ್ಯ ಕೂಡ ಧ್ವನಿಗೂಡಿಸಿದರು. ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ನಗರಸಭೆಗೆ ಇನ್ನೂ ಸಾಧ್ಯವಾಗಿಲ್ಲವೆಂದು ಆರೋಪಿಸಿದರು.

ಕಂದಾಯ ವಸೂಲಿ ಮಾಡುವಂತೆ ಒತ್ತಾಯ: ಹಕ್ಕುಪತ್ರವಿಲ್ಲದ ಮನೆಗಳಿಂದಲೂ ಇಲ್ಲಿಯವರೆಗೆ ಕಂದಾಯ ವಸೂಲಿ ಮಾಡುತ್ತಿದ್ದ ನಗರಸಭೆ ಇತ್ತೀಚೆಗೆ ಕಂದಾಯ ಪಾವತಿಗೆ ಬಂದವರಿಗೆ ಫಾರಂ ಸಂಖ್ಯೆ 3 ರ ಅಗತ್ಯವಿದೆ ಎಂದು ವಿನಾಕಾರಣ ಕಿರುಕುಳ ನೀಡುತ್ತಿದೆ. ಕಂದಾಯ ನೀಡಲು ಬಂದವರನ್ನು ವಾಪಸು ಕಳುಹಿಸಲಾಗುತ್ತಿದೆ. ಈ ರೀತಿ ಮಾಡುವುದರಿಂದ ನಗರಸಭೆಯ ಆದಾಯ ಕೈತಪ್ಪಿ ಹೋಗುತ್ತದೆ ಎಂದು ಸದಸ್ಯ ಕೆ.ಎಸ್.ರಮೇಶ್ ಅಭಿಪ್ರಾಯಪಟ್ಟರು. ಸಂದರ್ಭ ಮಾತನಾಡಿದ ಪೌರಾಯುಕ್ತೆ ಪುಷ್ಪಾವತಿ 94 ಸಿ ಅರ್ಜಿ ಅನ್ವಯ ಅಕ್ರಮ-ಸಕ್ರಮದಡಿ ತಕರಾರು ಎದುರಾಗಬಹುದಾದ ಕಾರಣ ಹಕ್ಕುಪತ್ರ ಇಲ್ಲದವರಿಂದ ಕಂದಾಯ ವಸೂಲಿ ಮಾಡದಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದರು.

 ಮಹದೇವಪೇಟೆ ರಸ್ತೆಯಲ್ಲಿ ಅವ್ಯವಸ್ಥೆ : ಮಹದೇವಪೇಟೆ ರಸ್ತೆ ಅಗಲೀಕರಣ ಕಾರ್ಯ ಅವೈಜ್ಞಾನಿ ಕವಾಗಿರುವುದರಿಂದ ಸ್ಥಳೀಯ ನಿವಾಸಿಗಳು ಹಾಗೂ ವರ್ತಕರು ಸಂಕಷ್ಟವನ್ನು ಎದುರಿಸುತ್ತಿದಾ

 ್ದರೆ ಎಂದು ಸದಸ್ಯೆ ತಜಸುಂ ತಿಳಿಸಿದರು. ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸುತ್ತಿರುವುದಕ್ಕೆ ಸದಸ್ಯ ಅಮಿನ್ ಮೊಹ್ಸೀನ್ ಆಕ್ಷೇಪ ವ್ಯಕ್ತಪಡಿಸಿದರು. ನಾಮ ನಿರ್ದೇಶಿತ ಸದಸ್ಯ ಉದಯ ಕುಮಾರ್ ಮಾತನಾಡಿ, ಶಾಲೆ ಆರಂಭಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದ್ದಿದ್ದು, ಈ ಮಾರ್ಗದ ಕ್ರಸಂಟ್ ಶಾಲಾ ಮಕ್ಕಳ ಓಡಾಟಕ್ಕೆ ಚರಂಡಿ ಕಾಮಗಾರಿ ಅಡ್ಡಿಯಾಗಿದೆ ಎಂದರು.

ನಿರ್ಣಯದಲ್ಲಷ್ಟೇ ಲೋಕಾಯುಕ್ತಕ್ಕೆ ದೂರು: ನಗರಸಭಾ ಸಾಮಾನ್ಯ ಸಭೆಯ ನಿರ್ಣಯದ ಬಳಿಕವೂ ಕೆಎಂಆರ್‌ಪಿ ಯೋಜನೆಯಡಿ ತಡೆಗೋಡೆ ನಿರ್ಮಾಣ ಕಾಮಗಾರಿಯ ವಿಚಾರವನ್ನು ಲೋಕಾಯುಕ್ತಕ್ಕೆ ದೂರು ನೀಡದ ಬಗ್ಗೆ ಸದಸ್ಯ ನಂದಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

  ಎಂಆರ್‌ಪಿ ಯೋಜನೆಯಡಿ 1.47 ಕೊಟಿ ರೂ. ವೆಚ್ಚದಲ್ಲಿ ನಗರದ ಎರಡು ಕಡೆಗಳಲ್ಲಿ ತಡೆಗೋಡೆ ನಿರ್ಮಾಣವಾಗಬೇಕಿತ್ತು. ಇದರಲ್ಲಿ ಒಂದು ನಿರ್ಮಾಣವಾಗಿದ್ದರೆ, ಮತ್ತೊಂದು ನಿರ್ಮಾಣವಾಗದೆ ಲಕ್ಷಾಂತರ ಹಣ ನಷ್ಟವಾಗಿದೆ. ಈ ಬಗ್ಗೆ ಹಿಂದಿನ ಸಭೆಯಲ್ಲೆ ಲೋಕಾಯುಕ್ತಕ್ಕೆ ಒಪ್ಪಿಸಲು ನಿರ್ಣಯ ಕೈಗೊಳ್ಳಲಾಗಿತ್ತಾದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News