×
Ad

ಜನರ ನಿರೀಕ್ಷೆ ಮೀರಿ ಸವಲತ್ತುಗಳ ವಿತರಣೆ: ಕಿಮ್ಮನೆ

Update: 2016-05-23 22:28 IST

ಶಿವಮೊಗ್ಗ, ಮೇ 23: ಜನರ ನಿರೀಕ್ಷೆಗೂ ಮೀರಿ ಸೌಲಭ್ಯಗಳನ್ನು ನೀಡಿರುವ ರಾಜ್ಯ ಸರಕಾರ ಯಶಸ್ವಿ ನಾಲ್ಕನೆ ವರ್ಷಕ್ಕೆ ದಾಪು ಹಾಕಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತವಾರಿ ಸಚಿವರೂ ಆದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ತೀರ್ಥಹಳ್ಳಿಯಲ್ಲಿ ಇತ್ತೀಚೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ರಾಜ್ಯ ಸರಕಾರದ ಮೂರು ವರ್ಷಗಳ ಸಾಧನೆ ಪುಸ್ತಕ ‘ನಾಲ್ಕನೆ ವರ್ಷದೆಡೆಗೆ ಭರವಸೆಯ ನಡಿಗೆ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಮೈತ್ರಿ, ಕ್ಷೀರಧಾರೆ, ಋಣಮುಕ್ತ, ವಸತಿ ಭಾಗ್ಯ, ಕೃಷಿಭಾಗ್ಯ ಸೇರಿದಂತೆ ಶೋಷಿತರ, ಬಡವರ ಪರ ನಿಲುವುಗಳನ್ನು ತಾಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ, ಜನರ ನಿರೀಕ್ಷೆಗೂ ಮೀರಿ ಸವಲತ್ತುಗಳನ್ನು ನೀಡುವ ಮೂಲಕ ನಾಲ್ಕನೆ ವರ್ಷಕ್ಕೆ ಯಶಸ್ವಿಯಾಗಿ ಮುನ್ನಡೆದಿದೆ ಎಂದರು.

ಜನರ ಸಂಕಷ್ಟಗಳನ್ನೇ ಗಮನದಲ್ಲಿರಿಸಿಕೊಂಡು ರೂಪಿಸಿರುವ ಯೋಜನೆಗಳನ್ನು ಕಳೆದ ಮೂರು ವರ್ಷಗಳಲ್ಲಿ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ಸರಕಾರ ರೂಪಿಸಲಿದೆ ಎಂದರು.

*ಶೂ ಭಾಗ್ಯ: ಶಿಕ್ಷಣ ಇಲಾಖೆ ವಹಿಸಿಕೊಂಡು ರಾಜ್ಯ ಪ್ರವಾಸ ಮಾಡುವ ಸಂದರ್ಭದಲ್ಲಿ ಬಯಲು ಸೀಮೆಯ ಬಹುತೇಕ ಸರಕಾರಿ ಶಾಲೆಯ ಮಕ್ಕಳು ಕಾಲಿಗೆ ಚಪ್ಪಲಿ ಇಲ್ಲದೆ ಬರುವುದನ್ನು ಗಮನಿಸಿದೆ. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಶಾಲಾ ಮಕ್ಕಳಿಗೆ ಒಂದು ಜೊತೆ ಶೂ ಹಾಗೂ ಎರಡು ಜೊತೆ ಕಾಲುಚೀಲ ವಿತರಿಸುವ ಶೂ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು. ಗುಣ ಮಟ್ಟದ ಶೂ ವಿತರಿಸಬೇಕೆಂಬ ಉದ್ದೇಶದಿಂದಲೇ ಶಾಲಾ ಅಭಿವೃದ್ಧಿ ಸಮಿತಿಗೆ ಶೂ ಖರೀದಿ ಜವಾಬ್ದಾರಿ ವಹಿಸಲಾಗಿದೆ. ಆದರೆ ಇತ್ತೀಚೆಗೆ ಕೆಲವು ಅಪಸ್ವರಗಳು ಕೇಳಿ ಬರುತ್ತಿರುವುದು ವಿಷಾದನೀಯ ಎಂದರು. ಶಾಲಾಭಿವೃದ್ಧಿ ಸಮಿತಿಯಲ್ಲಿ ಪೋಷಕರೇ ಇರುತ್ತಾರೆ. ತಮ್ಮ ಮಕ್ಕಳಿಗೆ ಗುಣಮಟ್ಟದ ಶೂ ಖರೀದಿಸುವ ಜವಾಬ್ದಾರಿ ಅವರದೇ ಆಗಿರುತ್ತದೆ. ಈ ವಿಷಯದಲ್ಲಿ ಲೋಪವಾದರೆ ತಾವು ಸಹಿಸುವುದಿಲ್ಲ ಎಂದರು.

ಇತ್ತೀಚೆಗೆ ಕೆಲವು ಖಾಸಗಿ ಶಾಲೆಗಳು ನಿಯಮ ಉಲ್ಲಂಘಿಸಿ ಪೋಷಕರಿಂದ ಡೊನೆಷನ್ ವಸೂಲಿ ಮಾಡುವ ಅಥವಾ ಶೈಕ್ಷಣಿಕ ವರ್ಷ ಆರಂಭಕ್ಕೆ ಮುನ್ನವೇ ದಾಖಲಾತಿ ಮುಗಿಸುವ ಪ್ರಕ್ರಿಯೆ ಕಂಡು ಬಂದಿದೆ. ಅಲ್ಲದೆ ಇತ್ತೀಚಿನ ಪ್ರಶ್ನೆ ಪತ್ರಿಕೆ ಬಯಲು ವಿಚಾರವನ್ನು ಗಮನದಲ್ಲಿರಿಸಿಕೊಂಡು ಈ ಕಾಯ್ದೆ ರೂಪಿಸಲಾಗುತ್ತಿದ್ದು, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳಿಸುವ ಕಾನೂನು ತರಲಾಗುತ್ತಿದೆ ಎಂದರು. ಈಗಾಗಲೇ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣದಲ್ಲಿ 10 ಆರೋಪಿಗಳನ್ನು ಜೈಲಿಗೆ ಕಳಿಸಲಾಗಿದೆ ಎಂದರು.

ಅಲ್ಲದೆ ಶೇ.100 ಫಲಿತಾಂಶಕ್ಕಾಗಿ ಕೆಲವು ದುರ್ಬಲ ಮಕ್ಕಳಿಗೆ ಟಿಸಿ ಕೊಟ್ಟು ಶಾಲೆ ಬಿಡಿಸುವ ಬಗ್ಗೆಯೂ ಕೇಳಿ ಬಂದಿದ್ದು, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 600ಕ್ಕೂ ಹೆಚ್ಚು ಅಂಕ ಗಳಿಸಿದ ತೀರ್ಥಹಳ್ಳಿಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಚಿವರು ಗೌರವಿಸಿದರು. ಸಭೆಯಲ್ಲಿ ಜಿಪಂ ಸದಸ್ಯರಾದ ಕಲ್ಪನಾ ಪದ್ಮನಾಭ, ಭಾರತಿ ಬಾಳೇಹಳ್ಳಿ ಪ್ರಭಾಕರ್, ಶ್ರೀನಿವಾಸ್, ಶರದಿ ಪೂರ್ಣೇಶ್, ಮುಖಂಡರಾದ ಗುಡ್ಡೇಕೊಪ್ಪ ನಾರಾಯ ಣರಾವ್, ತಹಶೀಲ್ದಾರ್ ಲೋಕೇಶ್ವರಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News