15ಸಿ ದರ್ಜೆ ಗಣಿ ಗುತ್ತಿಗೆ ಹರಾಜು, ಮುದ್ರಾಂಕ ಶುಲ್ಕ ಕಡಿತ

Update: 2016-05-23 17:40 GMT

ಸಚಿವ ಸಂಪುಟ ತೀರ್ಮಾನ
ಬೆಂಗಳೂರು, ಮೇ 23: ರಾಜ್ಯದಲ್ಲಿರುವ 15ಸಿ ದರ್ಜೆ ಗಣಿ ಗುತ್ತಿಗೆ ಹರಾಜು ಹಾಕಲು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಸಂಬಂಧ ಟೆಂಡರ್ ಆಹ್ವಾನಿಸಿದರೆ ಯಾರೊಬ್ಬರೂ ಅರ್ಜಿ ಹಾಕಲಿಲ್ಲ. ಹೀಗಾಗಿ ಮುದ್ರಾಂಕ ಮತ್ತು ನೋಂದಣಿ ಕಾನೂನಿಗೆ ತಿದ್ದುಪಡಿ ತರಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವ ಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯವನ್ನು ಪ್ರಕಟಿಸಿದರು.
ಕೈಗಾರಿಕೆಗಳ ದೃಷ್ಟಿಯಿಂದ ಅನಿವಾರ್ಯವಾಗಿ ಸಿ ದರ್ಜೆ ಗಣಿ ಗಳಿಗೆ ಅನುಮತಿ ನೀಡಬೇಕಿದೆ. ಆದುದರಿಂದ, ಮುದ್ರಾಂಕ ಮತ್ತು ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದು ಈ ಶುಲ್ಕ ಕಡಿಮೆ ಮಾಡಿ, ಆನಂತರ ಗಣಿಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ವಸತಿ ಸೇರಿದಂತೆ ಇನ್ನಿತರ ಸರಕಾರಿ ಯೋಜನೆಗಳಿಗೆ 100 ಎಕರೆವರೆಗೆ ನೇರವಾಗಿ ಭೂಮಿ ಖರೀದಿ ಸಂಬಂಧ ಕಾನೂನು ರಚನೆ ಮಾಡಲು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿ ಮಾಡುವ ಶಿಫಾರಸು ಆಧಾರದಲ್ಲಿ ಜಮೀನು ಖರೀದಿ ಮಾಡಲಾಗುವುದು. ಕೇವಲ ಸರಕಾರಿ ಯೋಜನೆ ಗಳಿಗೆ ಮಾತ್ರ ಭೂಮಿ ಖರೀದಿ ಸೀಮಿತವಾಗಿರಲಿದೆ ಎಂದು ಜಯಚಂದ್ರ ತಿಳಿಸಿದರು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿಗಳಿಗೆ ಜನತಾ ಬಝಾರ್ ಮೂಲಕ ಆಹಾರ ಪೂರೈಕೆ. ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಗಳಿಗಾಗಿ ಹೆಚ್ಚುವರಿ 19.09 ಕೋಟಿ ರೂ.ಬಿಡುಗಡೆ. ಕೊಳ್ಳೇಗಾಲ ಹಾಗೂ ತಿಪಟೂರು ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಉದ್ದೇಶಿಸಲಾಗಿದ್ದು, ಈ ಸಂಬಂಧ ಕೊಳ್ಳೇಗಾಲಕ್ಕೆ 54 ಕೋಟಿ ರೂ. ಹಾಗೂ ತಿಪಟೂರಿನ ಒಳಚರಂಡಿ ಕಾಮಗಾರಿಗಳಿಗಾಗಿ 24 ಕೋಟಿ ರೂ.ಬಿಡುಗಡೆ ಮಾಡಲು ತೀರ್ಮಾ ನಿಸಲಾಗಿದೆ ಎಂದು ಅವರು ಹೇಳಿದರು.

ಗದಗ ಜಿಲ್ಲೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ರಾಜ್ಯ ಕ್ರಿಕೆಟ್ ಸಂಸ್ಥೆಗೆ 12 ಎಕರೆ ಭೂಮಿ ಮಂಜೂರು ಮಾಡಲು ತೀರ್ಮಾ ನಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರನ್ವಯ ರಾಜ್ಯ ಆಹಾರ ಆಯೋಗವನ್ನು ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ತಿಳಿಸಿದರು. ರಾಜ್ಯ ರೇಷ್ಮೆ ಮಾರಾಟ ಮಂಡಳಿಯು ದುಡಿಯುವ ಬಂಡವಾಳ ಕ್ಕಾಗಿ ಕೆನರಾ ಬ್ಯಾಂಕ್‌ನಿಂದ 20 ಕೋಟಿ ರೂ.ಸಾಲವನ್ನು ಪಡೆಯಲು ಸರಕಾರದ ಖಾತರಿ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಮೈಸೂರು ಪೊಲೀಸ್ ಪಬ್ಲಿಕ್ ಶಾಲೆಯನ್ನು ಸೈನಿಕ್ ಶಾಲೆ ಅಥವಾ ಇತರೆ ಸಾರ್ವಜನಿಕ ಶಾಲೆಗಳ ಮಾದರಿಯಲ್ಲಿ ಮರು ರಚನೆ ಮಾಡಿ ಮೊದಲ ಹಂತದಲ್ಲಿ 22.51 ಕೋಟಿ ರೂ.ಅಂದಾಜು ಮೊತ್ತದಲ್ಲಿ ಉನ್ನತೀಕರಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಅವರು ಹೇಳಿದರು.
ಮಂಗಳೂರು ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 12 ಕೋಟಿ ರೂ.ಮಂಜೂರು. ಅಲ್ಲದೆ, ಮಂಗಳೂರು ತಾಲೂಕಿನ ಕೊಣಾಚೆ ಗ್ರಾಮದ ಸ.ನಂ.85/4ಪಿ, 5ಪಿ ಹಾಗೂ ಇತರೆ ಸರ್ವೇ ನಂಬರ್‌ಗಳ ಒಟ್ಟು 13 ಎಕರೆ 50 ಸೆಂಟ್ಸ್ ವಿಸ್ತೀರ್ಣದ ಜಮೀನಿನಲ್ಲಿ 10.21 ಕೋಟಿ ರೂ.ಅಂದಾಜು ಮೊತ್ತದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ವಸತಿ ಬಡಾವಣೆಯ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.
ಆಧಾರ ಯೋಜನೆಯಡಿ 10,069 ವಿಕಲಚೇತನ ಫಲಾ ನುಭವಿಗಳಿಗೆ ನೀಡಲಾದ 11.07 ಕೋಟಿ ರೂ. ಸಾಲದ ಮೊತ್ತ ಹಾಗೂ ಅದಕ್ಕೆ ತಗಲುವ ಬಡ್ಡಿಯನ್ನು ಮನ್ನಾ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಜಯಚಂದ್ರ ಹೇಳಿದರು.
ಬೆಂಗಳೂರಿನ ಸಂಸ್ಕರಿಸಿದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಚಿಂತಾಮಣಿಗೆ ಪೂರೈಕೆ ಮಾಡಲು ಅಂದಾಜು ಯೋಜನಾ ವೆಚ್ಚವನ್ನು 148 ಕೋಟಿ ರೂ.ಗೆ ನಿಗದಿಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿನ ಬರಪರಿಹಾರ ಕಾಮಗಾರಿಗಳಿಗಾಗಿ ಬಿಡುಗಡೆ ಮಾಡಿದ್ದ 275.34 ಕೋಟಿ ರೂ.ಗಳಿಗೆ ಘಟನೋತ್ತರ ಮಂಜೂರಾತಿಯನ್ನು ಸಚಿವ ಸಂಪುಟ ಸಭೆಯಲ್ಲಿ ನೀಡಲಾಗಿದೆ ಎಂದು ಜಯಚಂದ್ರ ತಿಳಿಸಿದರು.

ಸಾಂಸ್ಕೃತಿಕ ನೀತಿ ಜಾರಿಗೆ ಉಪ ಸಮಿತಿ
ಸಾಂಸ್ಕೃತಿಕ ನೀತಿ ಜಾರಿಗೆ ಸಂಬಂಧಿಸಿದಂತೆ ಸಾಹಿತಿ ಬರಗೂರು ರಾಮಚಂದ್ರಪ್ಪ ನೀಡಿರುವ ವರದಿಯ ಅನುಷ್ಠಾನದ ಕುರಿತು ಪರಾಮರ್ಶೆ ನಡೆಸಲು ಸಚಿವ ಸಂಪುಟ ಉಪಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News