ಮತ್ತೊಮ್ಮೆ ವೈಜ್ಞಾನಿಕ ಸಮೀಕ್ಷೆಗೆ ಲಿಂಗಾಯತ-ಒಕ್ಕಲಿಗರ ಒತ್ತಾಯ

Update: 2016-05-23 17:42 GMT

ಬೆಂಗಳೂರು, ಮೇ 23: ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ವರದಿ ಸೋರಿಕೆ ಹಿನ್ನೆಲೆಯಲ್ಲಿ ಈ ಅವೈಜ್ಞಾನಿಕ ವರದಿಯನ್ನು ರಾಜ್ಯ ಸರಕಾರ ಬಹಿರಂಗಪಡಿಸದೆ ಮತ್ತೊಮ್ಮೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾ ಸಭಾ ಮತ್ತು ರಾಜ್ಯ ಒಕ್ಕಲಿಗರ ಒಕ್ಕೂಟ ಸರಕಾರಕ್ಕೆ ಮನವಿ ಮಾಡಿವೆ.

ಸೋಮವಾರ ಇಲ್ಲಿನ ರಮಣ ಮಹರ್ಷಿ ರಸ್ತೆಯಲ್ಲಿನ ವೀರಶೈವ ಮಹಾಸಭಾ ಕಚೇರಿ ಸಭಾಂಗಣದಲ್ಲಿ ‘ಜಾತಿ ಗಣತಿ ವರದಿಯ ಸಾಧಕ-ಬಾಧಕಗಳ’ ಕುರಿತು ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ‘ಅಹಿಂದ ವರ್ಗಗಳಿಗೆ ಅನುಕೂಲ ಮಾಡಿಕೊಡಲು ನಮ್ಮ ತಕರಾರು ಇಲ್ಲ. ಆದರೆ, ಬಹುಸಂಖ್ಯಾತರಾದ ವೀರಶೈವ ಮತ್ತು ಒಕ್ಕಲಿಗರ ಸಂಖ್ಯೆಯನ್ನು ಕಡಿಮೆ ತೋರಿಸಿ ನಮ್ಮ ಶಕ್ತಿಯನ್ಮು ಕುಗ್ಗಿಸುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಇದರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಮಹಾ ಸಭಾ ಅಧ್ಯಕ್ಷ ಎನ್.ತಿಪ್ಪಣ್ಣ ಸರಕಾರಕ್ಕೆ ನೀಡಿದರು.
ಸಮೀಕ್ಷೆ ಯಾವ ಪುರುಷಾರ್ಥಕ್ಕೆ: ಜಾತಿ ಗಣತಿ ಮಾಡ ಬಾರ ದೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಸಾಮಾಜಿಕ ಮತ್ತು ಶೈಕ್ಷಣಿಕತೆಯ ಹೆಸರಿನಲ್ಲಿ ರಾಜ್ಯ ಸರಕಾರ ಜಾತಿ ಸಮೀಕ್ಷೆ ನಡೆಸಿದೆ. ಅಲ್ಲದೆ, ಸಿದ್ದರಾಮಯ್ಯ ಮತ್ತು ಸಚಿವ ಆಂಜನೇಯ ಬಹಿರಂಗವಾಗಿ ಈ ಜಾತಿ ಸಮೀಕ್ಷೆಯನ್ನು ಆಧರಿಸಿ ಮೀಸಲಾತಿ ಕಲ್ಪಿಸುತ್ತೇವೆ ಎಂಬ ಹೇಳಿಕೆ ನೀಡುವ ಮೂಲಕ ಜಾತಿ ಸಮೀಕ್ಷೆ ಎಂದು ಒಪ್ಪಿಕೊಂಡಿರುವುದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ತಿಪ್ಪಣ್ಣ ಟೀಕಿಸಿದರು.
‘ಅಹಿಂದ’ ಅಜೆಂಡಾವನ್ನಿಟ್ಟುಕೊಂಡ ಮುಖ್ಯಮಂತ್ರಿ ಸಿದ್ದರಾ ಮಯ್ಯ ನೇತೃತ್ವದ ಸರಕಾರ ರಾಜ್ಯದಲ್ಲಿನ ಬಹುಸಂಖ್ಯಾತರನ್ನು ಹತ್ತಿಕ್ಕಲು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನೆಪದಲ್ಲಿ ಜಾತಿ ಗಣತಿ ನಡೆಸಲು ಸುಮಾರು 200 ಕೋಟಿ ರೂ.ಗಳನ್ನು ವ್ಯಯ ಮಾಡ ಬೇಕಿತ್ತೇ ಎಂದು ಖಾರವಾಗಿ ಪ್ರಶ್ನಿಸಿದರು.
ರಾಜ್ಯದಲ್ಲಿನ ಲಿಂಗಾಯತರು ಮತ್ತು ವೀರಶೈವರು ಸೇರಿ 2.5 ಕೋಟಿ ಮಂದಿ ಇದ್ದಾರೆ. ಆದರೆ, ಎರಡೂ ಜಾತಿಯನ್ನು ಸಮೀಕ್ಷೆಯಲ್ಲಿ ಕೇವಲ 1ಕೋಟಿ ಗೆ ಸೀಮಿತ ಮಾಡಿ ಸರಕಾರ ಯಾವ ಸಾಧನೆ ಮಾಡಲು ಹೊರಟಿದೆ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಸಮೀಕ್ಷಾ ವರದಿ ಬಹಿರಂಗಕ್ಕೆ ಮೊದಲು ಒಂದು ಸಮಿತಿ ರಚಿಸಿ ವರದಿಯನ್ನು ಪರಾಮರ್ಶಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಜಾತಿ ಸಮೀಕ್ಷೆಯ ವರದಿ ಸೋರಿಕೆ ಯಾಗಿದ್ದು, ಅದರ ಪ್ರಕಾರ ರಾಜ್ಯದಲ್ಲಿ ಒಕ್ಕಲಿಗರು ಜನಸಂಖ್ಯೆ 49ಲಕ್ಷ ಮತ್ತು ವೀರಶೈವರ ಸಂಖ್ಯೆ 59ಲಕ್ಷ ಎಂಬುದು ಬಹಿರಂಗವಾಗಿದೆ. ಆದರೆ, ರಾಜ್ಯದಲ್ಲಿ ನಾಲ್ಕು ಆಯೋಗಗಳ ಸಮೀಕ್ಷೆ ಅಂಶಗಳನ್ನು ನೋಡಿದರೆ ಈ ಸಮೀಕ್ಷೆಯಲ್ಲಿ ಬಹಳ ವ್ಯತ್ಯಾಸವಿದೆ. ಆದುದರಿಂದ ಸಮೀಕ್ಷಾ ವರದಿಯನ್ನು ಬಹಿರಂಗಪಡಿಸಬಾರದು ಎಂದು ಆಗ್ರಹಿಸಿದರು.
ಸಭೆಯಲ್ಲಿ ಮಾಜಿ ಸಚಿವ ಎಂ.ವಿ.ರಾಜಶೇಖರನ್, ಒಕ್ಕಲಿಗ ಸಮುದಾಯದ ಮುಖಂಡ ತಿಮ್ಮೇಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ ಪುಟ್ಟೇಗೌಡ ಸೇರಿದಂತೆ ಉಭಯ ಸಮುದಾಯಗಳ ಗಣ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News