ಭೂಮಿ ಮಾರಾಟದ ವಸ್ತುವಲ್ಲ: ಎಚ್.ಎಸ್.ದೊರೆಸಾ್ವಮಿ ಅಭಿಮತ
ಬೆಂಗಳೂರು, ಮೇ 23: ಭೂಮಿ ಮಾರಾಟ ಮಾಡುವ ವಸ್ತುವಲ್ಲ. ಭೂಮಿಯನ್ನು ಕೃಷಿ ಮಾಡುವುದಕ್ಕೆ ಉಪಯೋಗಿಸ ಬೇಕೇ ವಿನಃ ಕೈಗಾರಿಕೆಗಳನ್ನು ನಿರ್ಮಾಣ ಮಾಡುವುದಕ್ಕಲ್ಲ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದ್ದಾರೆ.
ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ, ರಾಷ್ಟ್ರೀಯ ಚಿಂತಕರ ವೇದಿಕೆ ಹಾಗೂ ಕರ್ನಾಟಕ ಸಮತಾ ಸೈನಿಕ ದಳದ ಸಂಯುಕ್ತಾಶ್ರ ಯದಲ್ಲಿ ಆಯೋಜಿಸಿದ್ದ ‘ಪ್ರಜಾಪ್ರಭುತ್ವದಲ್ಲಿ ಮರೆಯಾಗುತ್ತಿರುವ ಮೌಲ್ಯಗಳು’ ಎಂಬ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾನಾಡಿದರು. ಕೃಷಿ ಮಾಡಲೆಂಬ ಉದ್ದೇಶದಿಂದ ಸರಕಾರ ಜನರಿಗೆ ಭೂಮಿ ನೀಡಿದೆ. ಆದರೆ, ಜನ ಇಂದು ಹಣಕ್ಕೆ ಮಾರು ಹೋಗಿ ಭೂಮಿ ಯನ್ನು ಕೈಗಾರಿಕೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಪ್ಪಿಸ ಬೇಕು. ಇಲ್ಲವಾದಲ್ಲಿ ದೇಶ ಮುಂದೊಂದು ದಿನ ಆಹಾರದ ಕೊರ ತೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರ ಭಾಗದ ಯಾವ ಕೆರೆಗಳು ಸುರಕ್ಷಿತವಾಗಿಲ್ಲ. ಎಲ್ಲ ಕೆರೆಗಳು ಭೂಗಳ್ಳರ ದಾಹಕ್ಕೆ ಬಲಿಯಾಗಿವೆ. ಇತ್ತ ಭೂಗಳ್ಳರ ವಕ್ರದೃಷ್ಟಿ ಇಂದು ಗ್ರಾಮೀಣ ಕೆರೆಗಳ ಮೇಲೆ ಬಿದ್ದಿದೆ. ಈ ಪರಿಣಾಮ ನೀರಿನ ಮೂಲಗಳು ದಿನೇ ದಿನೇ ಕಣ್ಮರೆಯಾಗುತ್ತಿವೆ. ಈ ಪರಿಣಾಮ ಇಂದು ರಾಜ್ಯದಲ್ಲಿ ಟ್ಯಾಂಕರ್‌ಗಳ ಮೂಲಕ ನೀರನ್ನು ಪೂರೈಸಿಕೊಂಡು ಕೃಷಿ ಮಾಡುವ ದುಸ್ಥಿತಿಗೆ ತಲುಪಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆರೆ ಒತ್ತುವರಿ ಕುರಿತು ವರದಿಯನ್ನು ಸಿದ್ಧಪಡಿಸಿಲು ಸರಕಾರವೇ ನೇಮಿಸಿದ ಕೋಳಿವಾಡ ಸಮಿತಿ ಮತ್ತು ಎ.ಟಿ. ರಾಮ ಸ್ವಾಮಿ ಸಮಿತಿಗಳು ಸರಕಾರಕ್ಕೆ ವರದಿಯನ್ನು ಸಲ್ಲಿಸಿವೆ. ಈ ವರದಿ ಗಳಲ್ಲಿ ಯಾರು-ಯಾರು ಭೂ ಕಬಳಿಕೆ ಮಾಡಿದ್ದಾರೆ ಎಂಬುದನ್ನು ಸಾಕ್ಷಾಧಾರಗಳ ಸಮೇತ ಬಹಿರಂಗಪಡಿಸಿದ್ದಾರೆ. ಆದರೆ ಸರಕಾರ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿರುವುದು ಏಕೆ ಎಂದು ಪ್ರಶ್ನೆ ಮಾಡಿದರು.
ದೇಶದಲ್ಲಿ ಹಣಕ್ಕೆ ಬೆಲೆಕೊಡುವಷ್ಟು ಮನುಷ್ಯರಿಗೆ, ಮಾನವೀಯ ಸಂಬಂಧಗಳಿಗೆ ಕೊಡುತ್ತಿಲ್ಲ. ಹಣದಿಂದ ಜೀವನ ಮಾಡುವುದಕ್ಕೆ ಸಾಧ್ಯ ಎನ್ನುವ ಮಟ್ಟಿಗೆ ಜನರ ಆಲೋಚನೆಗಳು ನಿಂತಿವೆ ಎಂದು ಹೇಳಿದ ಅವರು, ಭೂಮಿ ಪಟ್ಟಭದ್ರ ಹಿತಾಸಕ್ತಿಗಳ ಪಾಲಾಗುವುದನ್ನು ತಪ್ಪಿಸಬೇಕು. ಕೆರೆಗಳ ಹೂಳನ್ನು ತೆಗೆದು ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಅಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಶಿಕ್ಷಣ ಇಂದು ದೊಡ್ಡ ಮಾಫಿಯವಾಗಿ ಬೆಳೆಯುತ್ತಿದೆ. ದಿನೇ ದಿನೇ ಶಿಕ್ಷಣ ಸಂಸ್ಥೆಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಇನ್ನೊಂದು ಕಡೆ ಮಾಫಿಯಾ ಗಳೇ ಇಂದು ಸರಕಾರಗಳನ್ನು ನಿಯಂತ್ರಿಸುತ್ತಿವೆ. ಪ್ರಜಾಪ್ರಭುತ್ವ ಮತ್ತು ರಾಜಕೀಯ ಅರಾಜಕತೆಗೆ ಕಡಿವಾಣ ಹಾಕಲು ನಾಗರಿಕ ಸಮಾಜ ಸದೃಢವಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮತಾ ಸೈನಿಕ ದಳದ ಅಧ್ಯಕ್ಷ ಬಿ. ಚನ್ನಕೃಷ್ಣಪ್ಪ, ರಾಷ್ಟ್ರೀಯ ಚಿಂತಕರ ವೇದಿಕೆಯ ಅಧ್ಯಕ್ಷ ಸಿ.ಕೆ.ರವಿಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.