×
Ad

ಕಲಬುರ್ಗಿ ಹತ್ಯೆ; ತನಿಖೆ ವಿಳಂಬ - ರಾಷ್ಟ್ರಪತಿಗೆ ಲೇಖಕರ ಪತ್ರ

Update: 2016-05-24 20:13 IST

ಬೆಂಗಳೂರು, ಮೇ 24: ಹಿರಿಯ ವಿದ್ವಾಂಸ, ಹಂಪಿ ವಿ.ವಿ. ನಿವೃತ್ತ ಕುಲಪತಿ ಡಾ. ಎಂ. ಎಂ. ಕಲಬುರ್ಗಿ ಅವರ ಹತ್ಯೆಯ ಆರೋಪಿಗಳನ್ನು ಬಂಧಿಸಲು ವಿಫಲವಾಗಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ನಾಡಿನ ಹಿರಿಯ ಲೇಖಕರು, ಈ ಸಂಬಂಧ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಪ್ರೊ. ಚಂದ್ರಶೇಖರ ಪಾಟೀಲ್, ಡಾ. ನರೇಂದ್ರ ನಾಯಕ್, ಡಾ. ಪಂಡಿತಾರಾಧ್ಯ, ಹೇಮಾ ಪಟ್ಟಣ ಶೆಟ್ಟಿ, ವಸಂತ ಶೆಟ್ಟಿ ಮೊದಲಾದವರು ಈ ಪತ್ರಗಳಿಗೆ ಸಹಿ ಹಾಕಿದ್ದು, ಕಲಬುರ್ಗಿ ಹತ್ಯೆಯ ಹಿಂದಿರುವವರನ್ನು ಜನತೆಯ ಮುಂದಿಡಬೇಕು ಎಂದು ಒತ್ತಾಯಿಸಿದ್ದಾರೆ.

ಕಲಬುರ್ಗಿಯವರ ತನಿಖೆಯ ಜವಾಬ್ದಾರಿಯನನು ಹೊತ್ತಿರುವ ರಾಜ್ಯ ಸರಕಾರದ ಸಿಐಡಿ ಇಲಾಖೆ ಇದುವರೆಗೆ ಹತ್ಯೆಗೈದವರ ಬಗ್ಗೆ ಸ್ಪಷ್ಟವಾಗಿ ಯಾವ ಮಾಹಿತಿಯನ್ನೂ ಜನತೆಯ ಮುಂದಿಟ್ಟಿಲ್ಲ. ದುಷ್ಕರ್ಮಿಗಳ ರೇಖಾಚಿತ್ರಗಳನ್ನು ಬಿಡುಗಡೆಗೊಳಿಸಿದ್ದನ್ನು ಬಿಟ್ಟರೆ ಇದುವರೆಗೂ ದುಷ್ಕರ್ಮಿಗಳ ತನಿಖೆ ಯಾವ ಹಂತ ತಲುಪಿದೆ ಎಂದು ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆಯ ಕಾರ್ಯವೈಖರಿಯ ಬಗ್ಗೆ ಸಂಶಯ ಮೂಡುವಂತೆ ಮಾಡಿದೆ ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯ ಪೊಲೀಸ್ ವ್ಯವಸ್ಥೆಯ ನಿಧಾನಗತಿಯ ತನಿಖಾ ಚಟುವಟಿಕೆಗಳನ್ನು ಗಮನಿಸಿದರೆ, ಕಲಬುರ್ಗಿ ಅಮಾನುಷ ಹತ್ಯೆ ಕೂಡ ಮಹಾರಾಷ್ಟ್ರದಲ್ಲಿ ಹತ್ಯೆಗೀಡಾದ ನರೇಂದ್ರ ದಾಭೋಲ್ಕರ್ ಮತ್ತು ಪನ್ಸಾರೆಯವರ ತನಿಖೆಗಳಂತೆ ಮುಚ್ಚಿ ಹೋಗುವ ಸೂಚನೆ ಕೊಡುವಂತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶೀಘ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News