ಆಕರ್ಷಿಸಿದ ಪಂಚಭಾಷಾ ಅಕಾಡಮಿಗಳ ವರ್ಣರಂಜಿತ ಮೆರವಣಿಗೆ
ಮಡಿಕೇರಿ, ಮೇ 24: ಕೊಡವ, ಅರೆಭಾಷಾ ಗೌಡ ಸಮುದಾಯ ಬಾಂಧವರ ಸಾಂಪ್ರದಾಯಿಕ ಉಡುಪಿನೊಂದಿಗಿನ ಗಾಂಭೀರ್ಯದ ನಡಿಗೆ, ತುಳು ಸಂಸ್ಕೃತಿಯ ಕಂಬಳ, ಬ್ಯಾರಿ ಸಮುದಾಯದ ದಫ್, ಕೊಂಕಣಿ ಸಮುದಾಯದ ಉತ್ಸಾಹದ ಹೆಜ್ಜೆ ಪಂಚ ಭಾಷಾ ಅಕಾಡಮಿಗಳ ಸಾಹಿತ್ಯ ಸಾಂಸ್ಕೃತಿಕ ಸಮ್ಮಿಲನ ಕಾರ್ಯಕ್ರಮಕ್ಕೆ ವರ್ಣರಂಜಿತ ಕಳೆಯನ್ನು ತಂದುಕೊಟ್ಟಿತು. ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿಯಿಂದ ಮಂಗಳವಾರ ಬೆಳಗ್ಗೆ ಸಾಂಸ್ಕೃತಿಕ ಮೆರವಣಿಗೆಯನ್ನು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದರು. ಕೊಡಗಿನ ಸಾಂಪ್ರದಾಯಿಕ ಕೊಂಬ್ ಕೊಟ್ಟ್ ವಾಲಗದೊಂದಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಕೊಡವರು ಮತ್ತು ಅರೆಭಾಷಾ ಗೌಡ ಸಮೂಹ ಬಾಂಧವರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಇವರೊಂದಿಗೆ ತುಳು ಭಾಷಾ ಅಕಾಡಮಿಯ ಕಂಬಳ ಸ್ತಬ್ಧ ಚಿತ್ರ ಗಮನ ಸೆಳೆೆಯಿತು. ಕುದುರೆಯನ್ನೇರಿ ಬಂದ ಗುಡ್ಡೆಮನೆ ಅಪ್ಪಯ್ಯ ಗೌಡರ ಅರೆಭಾಷಾ ಅಕಾಡಮಿಯ ಸ್ತಬ್ಧ ಚಿತ್ರ ಆಕರ್ಷಕವಾಗಿತ್ತು.
ತುಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಭೂತದ ಕೋಲ, ಯಕ್ಷಗಾನ, ಕೊಂಕಣಿ ಸಮುದಾಯ ಬಾಂಧವರ ನೃತ್ಯಗಳು ಮೆರವಣಿಗೆಯ ಕಳೆಯನ್ನು ಹೆಚ್ಚಿಸಿತು.