ದಾವಣಗೆರೆ: ಭಿಕ್ಷುಕರು ಪುನರ್ವಸತಿ ಕೇಂದ್ರಕ್ಕೆ ದಾಖಲು
ದಾವಣಗೆರೆ, ಮೇ 24: ನಗರದ ಎಲ್ಲೆಂದರಲ್ಲಿ ಭಿಕ್ಷೆ ಬೇಡುತ್ತಿದ್ದ ಸುಮಾರು 15ಕ್ಕೂ ಅಧಿಕ ಭಿಕ್ಷುಕರನ್ನು ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಭಿಕ್ಷುಕರ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಹಿಡಿದು ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದರು.
ನಗರದ ಜಯದೇವ ವೃತ್ತ, ಮಹಾತ್ಮಾಗಾಂಧಿ ವೃತ್ತ, ವಿದ್ಯಾರ್ಥಿ ಭವನ, ಬಸ್ ನಿಲ್ದಾಣ, ಹೊಟೇಲ್ ಮತ್ತಿತರೆಡೆಗಳಲ್ಲಿ ಭಿಕ್ಷಾಟನೆ ನಡೆಸುತ್ತಿದ್ದ ಭಿಕ್ಷುಕರಿಂದ ಸಾರ್ವಜನಿಕರು ಬೇಸತ್ತಿದ್ದರು. ಮಗುವಿನೊಂದಿಗೆ ರಸ್ತೆ ಸಿಗ್ನಲ್, ರೈಲು ನಿಲ್ದಾಣ ಮತ್ತಿತರೆಡೆಗಳಲ್ಲಿ ಭಿಕ್ಷೆ ಬೇಡುತ್ತಿದ್ದ 6 ಮಂದಿ ಮಹಿಳೆಯರು ಸೇರಿದಂತೆ 9 ಮಂದಿಯನ್ನು ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ.
ಮೊಬೈಲ್ ಸಂದೇಶ ನೀಡಿದ ಭಿಕ್ಷುಕರು: ಭಿಕ್ಷುಕರಲ್ಲಿ ಅನೇಕರು ಮೊಬೈಲ್ ಹೊಂದಿದ್ದು, ಮಂಗಳವಾರ ದಿಢೀರ್ ದಾಳಿ ನಡೆಸಿದ ಸಂದರ್ಭದಲ್ಲಿ ಅನೇಕ ಭಿಕ್ಷುಕರು ತಮ್ಮ ಇತರೆ ಕಡೆಗಳಲ್ಲಿ ಭಿಕ್ಷೆ ಬೇಡುವ ತಮ್ಮ ಕುಟುಂಬದವರಿಗೆ ಕರೆಮಾಡಿ ತಪ್ಪಿಸಿಕೊಳ್ಳುವಂತೆ ಸೂಚಿಸಿದ್ದರಿಂದ ಅನೇಕ ಭಿಕ್ಷುಕರು ತಲೆಮರೆಸಿಕೊಂಡರು. ಮುಂದಿನ ದಿನಗಳಲ್ಲಿ ನಿರಂತರ ದಾಳಿ ನಡೆಸಿ ಎಲ್ಲ ಭಿಕ್ಷುಕರನ್ನು ಕರೆದೊಯ್ದು ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗುವುದು ಎಂದು ಮಕ್ಕಳ ರಕ್ಷಣಾಧಿಕಾರಿ ಕೆ.ಎಸ್. ವಿಜಯಕುಮಾರ್ ತಿಳಿಸಿದರು.
ನಗರದ ಎಲ್ಲೆಂದರಲ್ಲಿ ಭಿಕ್ಷುಕರ ಹಾವಳಿ ಮೀತಿಮೀರಿದ ಕುರಿತು ಸಾರ್ವಜನಿಕರು ಅನೇಕ ಬಾರಿ ದೂರು ನೀಡಿದ್ದರು. ಅನೇಕ ಮಹಿಳೆಯರು ಹೆಚ್ಚಿನ ಹಣಗಳಿಸುವ ಆಸೆಗೆ ಹಸುಗೂಸುಗಳನ್ನು ಕಂಕುಳಲ್ಲಿ ಎತ್ತಿಕೊಂಡು ಅನುಕಂಪದ ಭಿಕ್ಷೆ ಬೇಡುತ್ತಿದ್ದಾರೆ. ಇದರಿಂದ ದೊಡ್ಡ ಜಾಲವೇ ಇರುವಂತಿದೆ. ಈಗಾಗಲೇ ಅನೇಕ ಬಾರಿ ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರೂ ಬೇರೆಡೆಯಿಂದ ಭಿಕ್ಷುಕರು ನಗರದಲ್ಲಿ ಭಿಕ್ಷೆ ಬೇಡುವ ಕಾಯಕಕ್ಕೆ ಇಳಿದಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದಭರ್ದಲ್ಲಿ ಸಮಾಜ ಕಲ್ಯಾಣ ಇಲಾಖೆ ಮುಖ್ಯ ಅಧಿಕಾರಿ ಕುಮಾರ ಹನುಮಂತಪ್ಪ, ಅಧೀಕ್ಷಕ ಶಿವಲಿಂಗಸ್ವಾಮಿ ಮತ್ತಿತರರಿದ್ದರು.