×
Ad

ಶಿವಮೊಗ್ಗ: ರಸ್ತೆ ಅವ್ಯವಸೆ್ಥ ಗೆ ಯುವತಿ ಬಲಿ

Update: 2016-05-24 22:30 IST

ಶಿವಮೊಗ್ಗ, ಮೇ 24: ಅಜಾಗರೂಕತೆ ಹಾಗೂ ಅತಿಯಾದ ವೇಗದಲ್ಲಿ ಆಗಮಿಸಿದ ಟಿಪ್ಪರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಸ್ಥಳದಲ್ಲಿಯೇ ಮೃತಪಟ್ಟು, ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ನಗರದ ಸೋಮಿನಕೊಪ್ಪ ರಸ್ತೆಯ ಸಹ್ಯಾದ್ರಿ ನಗರ ಬಡಾವಣೆಯ ಬಳಿ ನಡೆದಿದೆ. ಅಬ್ಬಲಗೆರೆ ಸಮೀಪದ ಹುಣಸೋಡು ಗ್ರಾಮದ ನಿವಾಸಿಯಾದ ಅಕ್ಷತಾ (23) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಸಹ್ಯಾದ್ರಿ ನಗರದ ನಿವಾಸಿ ಸುನೀತಾ (39)ಎಂಬವರು ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹರಿದು ಹೋದ ಚಕ್ರ ಸುನೀತಾರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದಲ್ಲಿ ಅಕ್ಷತಾರವರು ಹಿಂಬದಿ ಕುಳಿತುಕೊಂಡಿದ್ದರು. ಅಜಾಗರೂಕತೆ ಹಾಗೂ ಮಿತಿಮೀರಿದ ವೇಗದಲ್ಲಿ ಆಗಮಿಸಿದ ಟಿಪ್ಪರ್ ಲಾರಿ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದಾನೆ. ಇದರಿಂದ ಅಕ್ಷತಾರವರು ರಸ್ತೆಯ ಮೇಲೆ ಬಿದ್ದಿದ್ದು, ಇವರ ತಲೆಯ ಮೇಲೆ ಲಾರಿಯ ಚಕ್ರಗಳು ಹರಿದು ಹೋಗಿವೆ ಎನ್ನಲಾಗಿದೆ.

ಘಟನಾ ಸ್ಥಳದಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಮಾಂಸದ ಚೂರುಗಳು ಎಲ್ಲೆಂದರಲ್ಲಿ ಬಿದ್ದಿದ್ದ ಹೃದಯವಿದ್ರಾವಕ ದೃಶ್ಯ ಕಂಡು ಬಂದಿತು. ವಾಹನ ಚಲಾಯಿಸುತ್ತಿದ್ದ ಸುನೀತಾರವರು ಮತ್ತೊಂದು ಬದಿಯಲ್ಲಿ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿನೋಬನಗರ ಠಾಣೆ ಪಿಎಸ್ಸೈ ಅಭಯ್ ಪ್ರಕಾಶ್ ಸೋಮನಾಳ್, ಸಂಚಾರಿ ಠಾಣೆ ಪಿಎಸ್ಸೈ ಜಿ. ಶ್ರೀನಿವಾಸ್‌ರಾವ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ. ಪಿಡಬ್ಲ್ಯೂಡಿ ಇಲಾಖೆ ನಿರ್ಲಕ್ಷ್ಯ: ಸೋಮಿನಕೊಪ್ಪರಸ್ತೆಯ ಸಹ್ಯಾದ್ರಿ ನಗರ ಹಾಗೂ ಪ್ರೆಸ್ ಕಾಲನಿಯ ಬಳಿಯ ಸೇತುವೆಗಳು ಶಿಥಿಲಾವಸ್ಥೆಯಲ್ಲಿದ್ದು, ರಸ್ತೆಗಳು ಕಿರಿದಾಗಿವೆ. ಮತ್ತೊಂದೆಡೆ ಈ ರಸ್ತೆಯಲ್ಲಿ ಭಾರೀ ಸರಕು ಸಾಗಣೆಯ ವಾಹನಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತವೆ. ಇದರಿಂದ ಈ ರಸ್ತೆಯಲ್ಲಿ ಅಪಘಾತಗಳು ಸರ್ವೇ ಸಾಮಾನ್ಯ ಎಂಬಂತಾಗಿವೆ. ಈಗಾಗಲೇ ಹಲವು ಬಾರಿ ಈ ಎರಡು ಸೇತುವೆಗಳ ಬಳಿ ಹೊಸ ಸೇತುವೆ ನಿರ್ಮಾಣ ಮಾಡಬೇಕು. ರಸ್ತೆ ಅಗಲೀಕರಣಗೊಳಿಸಬೇಕು. ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸೂಚನಾ ಫಲಕ, ರಿಪ್ಲೆಕ್ಟರ್ ಅಳವಡಿಕೆ ಮಾಡಬೇಕು ಎಂದು ಲೋಕೋಪಯೋಗಿ (ಪಿಡಬ್ಲ್ಯೂಡಿ) ಇಲಾಖೆಗೆ ಮನವಿ ಮಾಡಲಾಗಿತ್ತು.

ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಇಲಾಖೆಯ ನಿರ್ಲಕ್ಷ್ಯದಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ರಸ್ತೆಯಲ್ಲಿ ಭಾರೀ ಸರಕು ಸಾಗಣೆಯ ಲಾರಿ, ಟ್ರ್ಯಾಕ್ಟರ್‌ಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತವೆ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಓಡಾಡುವುದೇ ದುಸ್ತರವಾಗಿ ಪರಿಣಮಿಸಿದೆ. ಲಾರಿ ಹಾಗೂ ಟ್ರ್ಯಾಕ್ಟರ್‌ಗಳ ಮಿತಿಮೀರಿದ ವೇಗಕ್ಕೆ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಾಗರಿಕರಿಂದ ದಿಢೀರ್ ಪ್ರತಿಭಟನೆ

 ರಸ್ತೆ ಅವಘಡದಲ್ಲಿ ಯುವತಿ ಮೃತಪಟ್ಟು, ಮಹಿಳೆ ಗಾಯಗೊಂಡಿದ್ದರಿಂದ ರೊಚ್ಚಿಗೆದ್ದ ಸ್ಥಳೀಯ ನಾಗರಿಕರು ದಿಢೀರ್ ಪ್ರತಿಭಟನೆ ನಡೆಸಿದರು. ಸೋಮಿನಕೊಪ್ಪರಸ್ತೆಯಲ್ಲಿರುವ ಕಿರಿದಾಗಿರುವ ಸೇತುವೆಗಳ ಅಗಲೀಕರಣ ಮಾಡಬೇಕು. ಹಂಪ್ಸ್ ಹಾಕಬೇಕು. ಮಿತಿಮೀರಿದ ವೇಗದಲ್ಲಿ ಸಂಚರಿಸುವ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ನಾಗರಿಕರು ಒತ್ತಾಯಿಸಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಉಪ ನಿರೀಕ್ಷಕ ಅಭಯ್ ಪ್ರಕಾಶ್ ಸೋಮನಾಳ್ ಹಾಗೂ ಜಿ. ಶ್ರೀನಿವಾಸ್‌ರಾವ್‌ರವರು ಉದ್ರಿಕ್ತ ನಾಗರಿಕರನ್ನು ಸಮಾಧಾನಗೊಳಿಸಿದರು. ಮಿತಿಮೀರಿದ ವೇಗದಲ್ಲಿ ಸಂಚರಿಸುವ ವಾಹನ ಚಾಲಕರ ವಿರುದ್ಧ ಕ್ರಮ ಜರಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News