×
Ad

ಕೆರೆಗಳ ಸಂರಕ್ಷಣೆಯಲ್ಲಿ ಜಿಲ್ಲಾಧಿಕಾರಿ ವಿಫಲ: ಆರೋಪ

Update: 2016-05-24 22:32 IST

 ಶಿವಮೊಗ್ಗ, ಮೇ 24: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಬಾರೀ ದೊಡ್ಡ ಪ್ರಮಾಣದಲ್ಲಿ ಕೆರೆ ಒತ್ತುವರಿ ಮಾಡಲಾಗಿದೆ. ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಮಾಡುವಲ್ಲಿ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ವಿಫಲರಾಗಿದ್ದಾರೆ. ಇಂತಹ ಅಧಿಕಾರಿಯ ಸೇವೆ ಜಿಲ್ಲೆಗೆ ಅಗತ್ಯವಿಲ್ಲ. ಇವರನ್ನು ವರ್ಗಾವಣೆ ಮಾಡಿ ದಕ್ಷ ಅಧಿಕಾರಿಯ ನಿಯೋಜನೆ ಮಾಡಬೇಕು ಎಂದು ಅಣ್ಣಾ ಹಝಾರೆ ಹೋರಾಟ ಸಮಿತಿ ಆಗ್ರಹಿಸಿದೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಂ. ಅಶೋಕ್ ಯಾದವ್, ಮುಂದಿನ ಪೀಳಿಗೆಗೆ ಕೆರೆಗಳು ಉಳಿಯಬೇಕು. ಇವುಗಳ ಸಂರಕ್ಷಣೆ ಮಾಡಬೇಕಾದುದು ಆಡಳಿತ ವರ್ಗದ ಆದ್ಯ ಕರ್ತವ್ಯವಾಗಿದೆ. ಆದರೆ ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಭವಿಷ್ಯದ ಪೀಳಿಗೆಯ ಬಗ್ಗೆ ಇವರಿಗೆ ಯಾವುದೇ ಕಳಕಳಿ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕೆರೆಗಳ ಸಂರಕ್ಷಣೆಗೆ ಸಮಿತಿ ನಡೆಸುತ್ತಿರುವ ಹೋರಾಟವು ಗುರಿ ಮುಟ್ಟುವವರೆಗೂ ನಡೆಯಲಿದೆ. ನಾಗರಿಕರು ಕೂಡ ಸಮಿತಿಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಅರೆಸ್ಟ್ ಮಾಡಿಸುತ್ತಾರೆ: ಕೆರೆ ಒತ್ತುವರಿ ತೆರವುಗೊಳಿಸಬೇಕು ಹಾಗೂ ಸಂರಕ್ಷಣೆಗೆ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿ ಸಮಿತಿಯು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಿರಂತರವಾಗಿ ಪ್ರತಿಭಟನೆ ನಡೆಸಿತು. ಕಚೇರಿಯಲ್ಲಿದ್ದರೂ ಡಿ.ಸಿ.ಯವರು ಅಹವಾಲು ಆಲಿಸಲಿಲ್ಲ. ಮನವಿ ಸ್ವೀಕರಿಸಲೂ ಇಲ್ಲ. ಆದರೆ ಇದಕ್ಕೆ ಬದಲಾಗಿ ಹೋರಾಟ ನಡೆಸುತ್ತಿದ್ದವರನ್ನು ಪೊಲೀಸರ ಮೂಲಕ ಬಂಧಿಸಿದ್ದರು ಎಂದು ದೂರಿದರು.

ಜಿಲ್ಲಾಧಿಕಾರಿಯವರಿಗೆ ಜಿಲ್ಲೆಯಲ್ಲಿರುವ ಕೆರೆಗಳ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಕೆರೆ ಸಂರಕ್ಷಣೆಯ ಬಗ್ಗೆ ಹೆಚ್ಚಾದ ಒತ್ತಡದ ಹಿನ್ನೆಲೆಯಲ್ಲಿ ಪ್ರಸ್ತುತ ಜಿಲ್ಲಾಡಳಿತವು ಕೆರೆ ಒತ್ತುವರಿ ತೆರವುಗೊಳಿಸುವ ನಾಟಕ ಮಾಡುತ್ತಿದೆ. ಪ್ರಾಮಾಣಿಕ ಯತ್ನ ನಡೆಸುತ್ತಿಲ್ಲ ಎಂದು ದೂರಿದರು. ಕೆರೆಗಳ ಒತ್ತುವರಿಯಾಗಿರುವುದನ್ನು ತೆರವುಗೊಳಿಸಿ ಸಂರಕ್ಷಿಸದಿದ್ದಲ್ಲಿ ಶಾಸಕರು, ಸಂಸದರು, ಜಿಲ್ಲಾಧಿಕಾರಿಯವರ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ಡಾ. ಬಿ.ಎಂ. ಚಿಕ್ಕಸ್ವಾಮಿ, ಬಿ.ಆರ್.ಶಿವಸ್ವಾಮಿ, ಡಿ. ರಾಜು, ಡಾ.ಶೇಖರ್ ಗೌಳೇರ್, ಎಚ್.ಆನಂದ್, ಡಿ.ತಿಮ್ಮಪ್ಪ, ಡಾ.ಸತೀಶ್‌ಕುಮಾರ್ ಶೆಟ್ಟಿ,ಅಜಯ್ ಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News