ವೃದ್ಧೆಯ ಹತ್ಯೆ: ಆರೋಪಿ ಬಂಧನಕ್ಕೆ ಗ್ರಾಮಸ್ಥರ ಒತ್ತಾಯ

Update: 2016-05-24 17:07 GMT

ಮೂಡಿಗೆರೆ, ಮೇ 24: ಬೆಟ್ಟಗೆರೆ ಗ್ರಾಮದಲ್ಲಿ ಇತ್ತೀಚೆಗೆ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆ ಸಣ್ಣಮ್ಮ ಎಂಬವರನ್ನು ಮನೆಯೊಳಗೆ ನುಗ್ಗಿ ಅತ್ಯಾಚಾರವೆಸಗಿ ಕಲ್ಲಿನಿಂದ ಜಜ್ಜಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುತ್ತಿಲ್ಲ. ಆರೋಪಿ ಗ್ರಾಮದಲ್ಲಿ ತಲವಾರು ಹಿಡಿದು ಗ್ರಾಮಸ್ಥರನ್ನು ಭೀತಿಗೊಳಿಸುತ್ತಿದ್ದಾನೆ ಎಂದು ಆರೋಪಿಸಿ ಬೆಟ್ಟಗೆರೆ ಗ್ರಾಮಸ್ಥರು ಮಂಗಳವಾರ ಮೂಡಿಗೆರೆ ಪೊಲೀಸ್ ಠಾಣೆಗೆ ತೆರಳಿ ಆರೋಪಿಯ ಶೀಘ್ರ ಬಂಧನಕ್ಕೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಕೊಲೆಗೀಡಾದ ವೃದ್ಧೆಯ ಪುತ್ರಿ ಲಕ್ಷ್ಮೀ ಮಾತನಾಡಿ, ತಮ್ಮ 70ವರ್ಷದ ತಾಯಿ ಸಣ್ಣಮ್ಮರನ್ನು ಆರೋಪಿ ಕುಬೇರ (ಲಕ್ಷ್ಮಣ) ಅತ್ಯಾಚಾರಗೈದು ಕೊಲೆ ಮಾಡಿರುವ ಶಂಕೆ ಬಲವಾಗಿದೆ. ಈತ ಈ ಹಿಂದೆ ಅನೇಕ ಬಾರಿ ತಮ್ಮ ತಾಯಿಯವರನ್ನು ಅತ್ಯಾಚಾರಗೈಯಲು ಪ್ರಯತ್ನಿಸಿದ್ದ. ಈ ವಿಷಯವನ್ನು ತಮ್ಮ ತಾಯಿ ತನ್ನೊಂದಿಗೆ 6ತಿಂಗಳ ಹಿಂದೆಯೇ ಹೇಳಿಕೊಂಡಿದ್ದರು. ಆದರೆ ಪೊಲೀಸರಿಗೆ ದೂರು ನೀಡಬೇಕು ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

ಘಟನೆ: ಮೇ 18ರಂದು ವೃದ್ಧೆ ಸಣ್ಣಮ್ಮ ತಮ್ಮ ಪುತ್ರ ಗೋಪಿ ಮನೆಯಿಂದ ತಾವು ವಾಸಿಸುತ್ತಿದ್ದ ಸ್ವಂತ ಮನೆಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ ಆರೋಪಿ ಕುಬೇರ ಸಣ್ಣಮ್ಮರನ್ನು ಹಿಂಬಾಲಿಸಿ ಮನೆಗೆ ನುಗ್ಗಿ ಅತ್ಯಾಚಾರಗೈದು ಮರ್ಮಾಂಗಕ್ಕೆ ಪ್ಲಾಸ್ಟಿಕ್ ತುರುಕಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಶಂಕೆಯಿದ್ದು, ಆರೋಪಿ ಶವವನ್ನು ಚಾಪೆಯಿಂದ ಸುತ್ತಿಟ್ಟಿದ್ದ. ಕೊಲೆ ಬಳಿಕ ಮೂರು ದಿನಗಳ ನಂತರ ಶವ ಪತ್ತೆಯಾಗಿದ್ದು, ಆ ದಿನ ನೀಡಿದ ದೂರಿನಲ್ಲಿ ಅತ್ಯಾಚಾರದ ಬಗ್ಗೆ ತಿಳಿಸಿರಲಿಲ್ಲ. ಮರು ಹೇಳಿಕೆ ಮೂಲಕ ದೂರು ನೀಡುವುದಾಗಿ ತಿಳಿಸಿದ್ದಾರೆ.

ಶವ ಪತ್ತೆಯಾದ ನಂತರ ಆರೋಪಿ ಕುಬೇರ ಗ್ರಾಮದಿಂದ ನಾಪತ್ತೆಯಾಗಿದ್ದ. ಇದರಿಂದಾಗಿ ಗ್ರಾಮಸ್ಥರಿಗೆ ಆರೋಪಿ ಕುಬೇರ ಮೇಲೆ ಅನುಮಾನ ಬಲಗೊಂಡಿದೆ. ಇದರಿಂದಾಗಿ ಗ್ರಾಮದ ಜನರು ತೀವ್ರ ಭೀತಿಯಿಂದ ಬದುಕುವಂತಾಗಿದೆ ಎಂದು ಗ್ರಾಮದ ನಿವಾಸಿಗಳು ಹೇಳಿಕೊಂಡರು.

ಈ ಸಂದರ್ಭದಲ್ಲಿ ಕೊಲೆಗೀಡಾದ ಸಣ್ಣಮ್ಮನವರ ಪುತ್ರ ಗೋಪಿ, ಪುತ್ರಿ ಲಕ್ಷ್ಮೀ, ಮೊಮ್ಮಕ್ಕಳಾದ ಚೈತ್ರಾ, ಚೇತನ್, ತಾಪಂ ಸದಸ್ಯ ಸುಂದರ್ ಕುಮಾರ್, ಬಿಎಸ್ಪಿ ಮುಖಂಡರಾದ ಬೆಟ್ಟಗೆರೆ ಶಂಕರ್, ಯು.ಬಿ.ಮಂಜಯ್ಯ, ಲೋಕವಳ್ಳಿ ರಮೇಶ್, ಹಳೆ ಮೂಡಿಗೆರೆ ಯೋಗೀಶ್, ಕಾಂಗ್ರೆಸ್ ಮುಖಂಡ ಬೆಟ್ಟಗೆರೆ ಮನೋಜ್, ಜೆಡಿಎಸ್ ಮುಖಂಡ ಬೆಟ್ಟಗೆರೆ ಉಪೇಂದ್ರಗೌಡ, ಹರೀಶ್, ಲಲಿತಾ, ಪೂರ್ಣಿಮಾ, ಬೆಟ್ಟಗೆರೆ ಮಂಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News