'ಸ್ವಚ್ಛ ಭಾರತ್ ಮಿಷನ್' ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮ

Update: 2016-05-24 17:08 GMT

ತರೀಕೆರೆ, ಮೇ 24: ಶೌಚಾಲಯ ನಿರ್ಮಾಣಕ್ಕೆ ಪ.ಜಾತಿ ಪ.ವರ್ಗಗಳಿಗೆ 15,000 ರೂ, ಇತರೆ ವರ್ಗಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ನೆರವಿನೊಂದಿಗೆ ಪುರಸಭೆ ಅನುದಾನ ನೀಡಲಿದೆ. ಅರ್ಹ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುರಸಭಾ ಅಧ್ಯಕ್ಷ ಟಿ.ಟಿ.ನಾಗರಾಜ್ ತಿಳಿಸಿದರು.

ಅವರು ಮಂಗಳವಾರ ಕನಕ ಕಲಾ ಭವನದಲ್ಲಿ ಏರ್ಪಡಿಸಲಾಗಿದ್ದ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್‌ನ ಬಯಲು ಮುಕ್ತ ಶೌಚಾಲಯ ನಿರ್ಮಾಣ, ಹಸಿ ಕಸ, ಒಣ ಕಸ ವಿಂಗಡನೆ ಮತ್ತು ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಹಾಗೂ ಬೀದಿ ನಾಟಕಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಗರವನ್ನು ಬಯಲು ಮುಕ್ತ ಶೌಚಾಲಯ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ ಕೇವಲ ಪುರಸಭಾ ಆಡಳಿತದಿಂದ ಸಾಧ್ಯವಿಲ್ಲ ಎಂದರು.

ಮಾಜಿ ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿ, ಪಟ್ಟಣದ ಸ್ವಚ್ಛತೆ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸ್ವಚ್ಛತೆಯ ಬಗ್ಗೆ ಸಾರ್ವಜನಿಕರು ಹೆಚ್ಚು ಜಾಗೃತರಾಗಬೇಕು ಎಂದರು.

ಮಾಜಿ ಅಧ್ಯಕ್ಷ ಪ್ರಕಾಶ್‌ವರ್ಮ, ಮುಖ್ಯಾಧಿಕಾರಿ ಗಿರೀಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಈರಣ್ಣ, ಕೃಷ್ಣ, ಟಿ.ಆರ್.ಮಂಜುನಾಥ್, ಆದಿಲ್‌ಪಾಷ, ಅಧಿಕಾರಿಗಳಾದ ರಮೇಶ್, ಮಹೇಶ್, ಆನಂದಪ್ಪ ಸೇರಿದಂತೆ ಮಹಿಳಾ ಸಂಘಗಳ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News