ಮುಂದುವರಿದ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ

Update: 2016-05-24 17:11 GMT

ಶಿವಮೊಗ್ಗ, ಮೇ 24: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಆರಂಭಿಸಿರುವ ಕೆರೆ ಒತ್ತುವರಿ ಕಾರ್ಯಾಚರಣೆ ಮುಂದುವರಿದಿದ್ದು, ಮೂರನೆ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿರುವ ಕೆರೆಯ ಒತ್ತುವರಿ ತೆರವು ನಡೆಯಿತು.

ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಉಪ ವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೂಕಪ್ಪ ಎಂ. ಕರಭೀಮಣ್ಣವರ್, ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ, ತಹಶೀಲ್ದಾರ್ ಸತ್ಯನಾರಾಯಣ, ರೆವಿನ್ಯೂ ಇನ್‌ಸ್ಪೆಕ್ಟರ್ ವಿಜಯ ಕುಮಾರ್, ಪಾಲಿಕೆ ಅಧಿಕಾರಿಗಳಾದ ಕೆ.ಟಿ.ನಾಗರಾಜ್, ಚಾಮರಾಜ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ನಾಗರಾಜ್, ಪಂಚಾಯತ್‌ರಾಜ್ ಎ.ಇ.ಇ. ಜಯಣ್ಣ ಮೊದಲಾ ದವರಿದ್ದರು. ಒತ್ತುವರಿ: ಸೋಮಿನಕೊಪ್ಪದ ಸರ್ವೇ ನಂಬರ್ 47 ರಲ್ಲಿರುವ ಕೆರೆಯು 92 ಎಕರೆ ವಿಸ್ತೀರ್ಣ ಹೊಂದಿದೆ. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಅತ್ಯಂತ ದೊಡ್ಡ ಕೆರೆಯಾಗಿದೆ. ಆದರೆ ಇತ್ತೀಚೆಗೆ ಕೆರೆಯ ಜಾಗ ಒತ್ತುವರಿ ಮಾಡಿದ್ದ ಆರೋಪ ಕೇಳಿಬಂದಿತ್ತು. ಕೆರೆಯ ಒಂದು ಬದಿಯಲ್ಲಿ ಖಾಸಗಿ ಲೇಔಟ್‌ನವರು ಕೆರೆಯ ಜಾಗ ಒತ್ತುವರಿ ಮಾಡಿಕೊಂಡಿದ್ದರು. ಹಾಗೆಯೇ ಮತ್ತೆ ಕೆಲವರು ಕೆರೆಯ ಜಾಗದ ಒಂದು ಬದಿಯಲ್ಲಿ ಮಣ್ಣಿನ ತಡೆಗೋಡೆ ನಿರ್ಮಿಸಿ ನೀರು ನಿಲ್ಲದಂತೆ ಮಾಡಿದ್ದರು. ಈ ಮೂಲಕ ಜಾಗ ಕಬಳಿಕೆಗೆ ಸನ್ನಾಹ ನಡೆಸಿದ್ದರು. ಮಂಗಳವಾರ ಜಿಲ್ಲಾಡಳಿತ ನಡೆಸಿದ ಕಾರ್ಯಾಚರಣೆಯ ವೇಳೆ ಒತ್ತುವರಿಯಾಗಿದ್ದ ಜಾಗ ವಶಕ್ಕೆ ಪಡೆಯಲಾಯಿತು. ಜೆಸಿಬಿಯ ಮೂಲಕ ಟ್ರಂಚ್ ಹೊಡೆಸಿ, ಕೆರೆಯ ಜಾಗ ಗುರುತು ಮಾಡಲಾಯಿತು. ಮುಂದುವರಿಯಲಿದೆ: ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ರವಿವಾರದಿಂದ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ತೆರವು ಹಾಗೂ ಸಂರಕ್ಷಣೆಯ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಆಲ್ಕೋಳ, ಬೊಮ್ಮನಕಟ್ಟೆ, ಕಾಶೀಪುರ, ಗೋಪಿ ಶೆಟ್ಟಿಕೊಪ್ಪಗಳಲ್ಲಿ ಕಾರ್ಯಾಚರಣೆ ಪೂರ್ಣಗೊಂಡಿದೆ.

ಪ್ರಸ್ತುತ ಸೋಮಿನಕೊಪ್ಪ ಕೆರೆಯ ಸಂರಕ್ಷಣೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದು ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News