'ಪ.ಜಾತಿ, ವರ್ಗದ ಅಭಿವೃದಿ್ಧಗೆ ಶೇ. 24ರಷು್ಟ ಹಣ ಮೀಸಲು'

Update: 2016-05-24 17:12 GMT

ಸಾಗರ, ಮೇ 24: ರಾಜ್ಯ ಸರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಅಭಿವೃದ್ಧಿಗೆ ಶೇ.24ರಷ್ಟು ಹಣವನ್ನು ಮೀಸಲು ಇಟ್ಟಿದೆ. ಕಳೆದ ಸಾಲಿನಲ್ಲಿ ಮೀಸಲಿಟ್ಟ 16 ಸಾವಿರ ಕೋಟಿ ರೂ. ಇತ್ತು. ಈ ಸಾಲಿನಲ್ಲಿ 17 ಸಾವಿರ ಕೋಟಿ ರೂ. ತಲಪುವ ಸಾಧ್ಯತೆ ಇದೆ. ಈ ಹಣವನ್ನು ಎಸ್ಸಿ, ಎಸ್ಟಿ ಜನಾಂಗಗಳ ಅಭಿವೃದ್ಧಿಗೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು

ಇಲ್ಲಿನ ಅರಣ್ಯ ಇಲಾಖೆ ವತಿಯಿಂದ ಮಂಗಳವಾರ ಸರಕಾರಿ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಅವರು ಮಾತನಾಡುತ್ತಿದ್ದರು.

ಅರಣ್ಯ ಇಲಾಖೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಸೌಲಭ್ಯ ನೀಡುವಾಗ ಅವರ ಆರ್ಥಿಕ ಸ್ಥಿತಿಗತಿ ಉತ್ತಮಗೊಳಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಜಮೀನು ಇದ್ದವರಿಗೆ ನೀರಾವರಿ ಸೌಲಭ್ಯ, ಹೈನುಗಾರಿಕೆ, ಕುರಿ-ಕೋಳಿ ಸಾಕಣೆ, ಮೀನುಸಾಕಣೆಯಂತಹವುಗಳಿಗೆ ಇಲಾಖೆಯಿಂದ ಆರ್ಥಿಕ ಸಹಕಾರ ನೀಡುವ ಬಗ್ಗೆ ಗಮನಹರಿಸಿ. ಅವರಲ್ಲಿರುವ ಆಸ್ತಿಯನ್ನು ಉಪಯೋಗಿಸಿಕೊಂಡು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರ ನೀಡಿದರೆ ಅವರು ನೆಮ್ಮದಿಯ ಜೀವನ ನಡೆಸುತ್ತಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಗಂಗೊಳ್ಳಿ ಮಾತನಾಡಿ, ಕಳೆದ ವರ್ಷದಲ್ಲಿ ಉಪವಿಭಾಗ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಇಲಾಖೆ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. 96ಜನರಿಗೆ ಅಡುಗೆ ಅನಿಲ, 44 ಕುಟುಂಬಗಳಿಗೆ ಸೋಲಾರ್ ಸೌಲಭ್ಯ, ಕೃಷಿ ಅರಣ್ಯ ಉತ್ಪಾದನೆ ಯೋಜನೆಯಡಿ 923 ಕುಟುಂಬಗಳಿಗೆ ಉಚಿತ ಗಿಡ ವಿತರಿಸಲಾಗಿದೆ ಎಂದರು.

ಕಾಡುಪ್ರಾಣಿಯಿಂದ ಆದ ಬೆಳೆಹಾನಿಗೆ 5.12 ಲಕ್ಷ ರೂ. ಬೆಳೆಪರಿಹಾರ, 10 ಶಾಲಾಕಾಲೇಜುಗಳಲ್ಲಿ ಬೆಳೆದಿರುವ ನೆಡುತೋಪು ವಿಲೇವಾರಿಯಿಂದ 49.90 ಲಕ್ಷ ರೂ. ಸಹಾಯಧನದ ಚೆಕ್ ಶಾಲಾಕಾಲೇಜು ಮುಖ್ಯಸ್ಥರಿಗೆ ನೀಡಲಾಗಿದೆ. ಸಾಗರದ ವರದಹಳ್ಳಿ ರಸ್ತೆಯಲ್ಲಿರುವ ಪವಿತ್ರವನಕ್ಕೆ ಕಾಂಪೌಂಡ್ ನಿರ್ಮಾಣಕ್ಕೆ 67 ಲಕ್ಷ ರೂ. ಖರ್ಚು ಮಾಡಲಾಗಿದೆ. ಜೋಗದಲ್ಲಿರುವ ಅರಣ್ಯ ವಿಶ್ರಾಂತಿ ಗೃಹ ಅಭಿವೃದ್ಧಿ, ಜೋಗದ ಶಿರೂರು ಕೆರೆ ಬಳಿ ರಾಕ್ ಗಾರ್ಡನ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಾಪಂ ಉಪಾಧ್ಯಕ್ಷ ಪರಶುರಾಮ್, ಸದಸ್ಯ ಅಶೋಕ್ ಬರದವಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News