×
Ad

ಪಡಿತರ ಚೀಟಿಗೆ ಆಧಾರ್ ಜೋಡಣೆಗೆ ಸೂಚನೆ

Update: 2016-05-25 21:47 IST

ಕಾರವಾರ, ಮೇ 25: ಪಡಿತರ ಚೀಟಿಗೆ ಆಧಾರ ಸಂಖ್ಯೆ ಜೋಡಣೆಗೆ ಮೇ 31ರವರೆಗೆ ಅವಧಿ ವಿಸ್ತರಿಸಲಾಗಿದ್ದು, ಇದುವರೆಗೆ ಆಧಾರ ಸಂಖ್ಯೆ ಜೋಡಣೆ ಮಾಡದೆ ಇರುವವರು ಕೂಡಲೇ ಆಧಾರ್ ಸಂಖ್ಯೆ ಜೋಡಣೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಸೂಚನೆ ನೀಡಿದ್ದಾರೆ.

ಬಿಪಿಎಲ್, ಅಂತ್ಯೋದಯ ಮತ್ತು ಎಪಿಎಲ್ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲ ಸದಸ್ಯರ ಆಧಾರ ಸಂಖ್ಯೆಯನ್ನು ಆಯಾ ಗ್ರಾಮ ಪಂಚಾಯತ್‌ಗಳಲ್ಲಿ ಮತ್ತು ನಗರ ಪ್ರದೇಶದ ಪಡಿತರ ಚೀಟಿದಾರರು ನಗರದ ಸೇವಾ ಕೇಂದ್ರಗಳಲ್ಲಿ ನೀಡಿ ಆಧಾರ ಸಂಖ್ಯೆಯನ್ನು ಪಡಿತರ ಚೀಟಿಗೆ ಜೋಡಣೆ ಮಾಡಿಸಿಕೊಳ್ಳಬಹುದು. ಅಲ್ಲದೇ ತಮ್ಮ ಮೊಬೈಲ್‌ನಿಂದ ಎಸ್ಸೆಮ್ಮೆಸ್‌ಮುಖಾಂತರ ಸಲ್ಲಿಸಲು ಸಹ ಅವಕಾಶವಿರುತ್ತದೆ. ಕಾರ್ಡುದಾರರು ಈ ಬಗ್ಗೆ ತಮ್ಮ ಹೆಚ್ಚಿನ ಮುತುವರ್ಜಿ ವಹಿಸಿ ತಮ್ಮ ಪಡಿತರ ಚೀಟಿಗೆ ಆಹಾರಧಾನ್ಯ ಸ್ಥಗಿತವಾಗದಂತೆ ಇಂದೇ ಪಡಿತರ ಚೀಟಿಗೆ ಆಧಾರ ಜೋಡಣೆಯನ್ನು ಕಡ್ಡಾಯವಾಗಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

ಸರಕಾರದ ನಿರ್ದೇಶನದಂತೆ ಜೂನ್ 2016ನೆ ಮಾಹೆಯಿಂದ ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಘಟಕಕಕೆ ಅಕ್ಕಿ 3 ಕೆ.ಜಿ., ಗೋಧಿ 2 ಕೆ.ಜಿ ಹಾಗೂ ಸಕ್ಕರೆ ಪ್ರತಿ ಪಡಿತರ ಬಿಪಿಎಲ್ ಚೀಟಿಗೆ ತಲಾ 1 ಕೆ.ಜಿ ಯಂತೆ 15 ರೂ. ದರದಲ್ಲಿ ವಿತರಿಸಲಾಗುತ್ತದೆ.

ತಹಶೀಲ್ದಾರ್ ಸೂಚನೆ: 

2016ನೆ ಜೂನ್ ಮಾಹೆಯಲ್ಲಿ ಅನಿಲ ರಹಿತ ಪಡಿತರ ಚೀಟಿದಾರರಿಗೆ ಕೂಪನ್ ಮೂಲಕ ಸೀಮೆ ಎಣ್ಣೆ ವಿತರಿಸಲಾಗುವುದು. ನಗರ ಪ್ರದೇಶದ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯೊಂದಿಗೆ ಸೇವಾ ಕೇಂದ್ರಗಳಿಗೆ ಹೋಗಿ ಉಚಿತವಾಗಿ ಕೂಪನ್ ಪಡೆದು ಪಡಿತರ ಚೀಟಿ ನಿಯೋಜಿಸಿದ ನ್ಯಾಯಬೆಲೆ ಅಂಗಡಿಯಿಂದ ನಿಯಂತ್ರಿತ ಸೀಮೆ ಎಣ್ಣೆ ಪಡೆಯುವಂತೆ ತಿಳಿಸಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ಅನಿಲ ರಹಿತ ಪಡಿತರ ಚೀಟಿದಾರರು ದೇವಳಮಕ್ಕಿ ಗ್ರಾಪಂನಿಂದ ಉಚಿತವಾಗಿ ಕೂಪನ್ ಪಡೆದು ವ್ಯವಸಾಯ ಸೇವಾ ಸಹಕಾರಿ ಸಂಘ ನ್ಯಾಯಬೆಲೆ ಅಂಗಡಿಯಿಂದ ಸೀಮೆ ಎಣ್ಣೆ ಪಡೆಯುವಂತೆ ಕಾರವಾರ ತಹಶೀಲ್ದಾರ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News