ಬರ ನಿರ್ವಹಣೆಯಲ್ಲಿ ಅಧಿಕಾರಿಗಳು ವಿಫಲ: ಆರೋಪ
ಮಡಿಕೇರಿ, ಮೇ 25: ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸುವಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ತಾಪಂ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಅಧ್ಯಕ್ಷತೆಯಲ್ಲಿ ತಾಪಂನ ಮೊದಲ ಸಾಮಾನ್ಯ ಸಭೆ ನಡೆಯಿತು. ಸಭೆಯ ಆರಂಭದಲ್ಲಿ ಮಾತನಾಡಿದ ಸದಸ್ಯ ನಾಗೇಶ್ ಕುಂದಲ್ಪಾಡಿ, ತಾಲೂಕಿನ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆಯಿಂದ ಸಂಕಷ್ಟ ಎದುರಿಸುತ್ತಿದ್ದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬರ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಜಿಲ್ಲಾಧಿಕಾರಿ ಬಳಿ ಹಣವಿದ್ದರೂ, ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು. ಕುಡಿಯುವ ನೀರಿನ ಯೋಜನೆಗಳ ಅನುಪಾಲನಾ ವರದಿ ನೀಡದ ಇಂಜಿನಿಯರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಾಗೇಶ್ ಕುಂದಲ್ಪಾಡಿ, ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ತಾಲೂಕನ್ನು ತ್ಯಜಿಸುವಂತೆ ಒತ್ತಾಯಿಸಿದರು. ಮಳೆಗಾಲ ಸಮೀಪಿಸುತ್ತಿದ್ದರೂ ಪ್ರಸ್ತಾವನೆ ಸಲ್ಲಿಸುವುದರಲ್ಲೇ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭ ಮಾತನಾಡಿದ ಜಿಪಂ ಸಹಾಯಕ ಇಂಜಿನಿಯರ್, ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಜಿಪಂ ಮತ್ತು ಜಿಲ್ಲಾಡಳಿತದ ಮೂಲಕ ಪ್ರತ್ಯೇಕವಾಗಿ ತಲಾ 50 ಲಕ್ಷ ರೂ. ಹಾಗೂ ಪ್ರತ್ಯೇಕವಾಗಿ 1 ಕೋಟಿ ರೂ. ನ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ಕುಡಿಯುವ ನೀರಿನ ತುರ್ತು ಸಮಸ್ಯೆ ಬಗೆಹರಿಸಲು ಹಣ ಬಿಡುಗಡೆಯಾಗಿದೆ. ಆದರೆ ತಾಪಂನಲ್ಲಿ ಇದರ ಸದ್ಬಳಕೆ ಯಾಕೆ ಆಗುತ್ತಿಲ್ಲ ಎನ್ನುವುದೇ ಅರ್ಥವಾಗುತ್ತಿಲ್ಲವೆಂದು ಸಭೆಯ ಗಮನ ಸೆಳೆದರು. ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಬಾವಿಗಳ ದುರಸ್ತಿ ಕಾರ್ಯ ಮತ್ತು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಕೊಡಗಿನಲ್ಲಿ ಹಣವಿದ್ದರೂ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ಅವರು ಆರೋಪಿಸಿದರು.
ಸ್ವಚ್ಛ ಭಾರತ್ ಯೋಜನೆಯಡಿ ತಾಲೂಕಿನಲ್ಲಿ ಬಾಕಿ ಉಳಿದಿರುವ 234 ಶೌಚಾಲಯಗಳನ್ನು ನಿರ್ಮಿಸುವ ಕುರಿತು ಚರ್ಚೆ ನಡೆಯಿತು. ಈ ಸಂದರ್ಭ ಮಾತನಾಡಿದ ಸದಸ್ಯರು ಸರಕಾರದ ಮೂಲಕ ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರ ಶೌಚಾಲಯವನ್ನು ನಿರ್ಮಿಸಿ ಕೊಡಲಾಗುತ್ತದೆ. ಆದರೆ ಕೆಲವು ಕಡೆ ಕಡು ಬಡವರಿಗೆ ಕೂಡ ಎಪಿಎಲ್ ಕಾರ್ಡ್‌ಗಳನ್ನು ನೀಡಲಾಗಿದ್ದು, ಇದರಿಂದ ಶೌಚಾಲಯ ನಿರ್ಮಾಣ ಕಾರ್ಯ ನಿಗದಿತ ಗುರಿ ತಲುಪಲು ಸಾಧ್ಯವಿಲ್ಲವೆಂದರು. ಈ ರೀತಿ ತಾರತಮ್ಯಕ್ಕೆ ಒಳಗಾಗಿರುವ ಕುಟುಂಬಗಳನ್ನು ಗುರುತಿಸಿ ಸಹಾಯ ಧನವನ್ನು ನೀಡುವಂತೆ ಮನವಿ ಮಾಡಿದರು. ತಹಶೀಲ್ದಾರ್ ಕಚೇರಿ ವಿರುದ್ಧ ಎಸಿಬಿಗೆ ದೂರು ನೀಡಿ:
ತಹಶೀಲ್ದಾರ್ ಹಾಗೂ ಶಿರಸ್ತ್ತೆದಾರ್ ಸಭೆಗೆ ಗೈರು ಹಾಜರಾದ ಬಗ್ಗೆ ಸದಸ್ಯರಿಂದ ಅಸಮಾಧಾನ ವ್ಯಕ್ತವಾಯಿತು. ನೀರಸ ಫಲಿತಾಂಶಕ್ಕೆ ಅಧಿಕಾರಿಗಳೇ ಹೊಣೆ: 10ನೆ ತರಗತಿ ಪರೀಕ್ಷೆಯಲ್ಲಿ ಸರಕಾರಿ ಶಾಲೆಗಳು ಕೇವಲ ಶೇ.49ರಷ್ಟು ಫಲಿತಾಂಶ ಗಳಿಸಿರುವ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳ ನಿರ್ಲಕ್ಷವೇ ಫಲಿತಾಂಶದ ಹಿನ್ನಡೆಗೆ ಕಾರಣವೆಂದು ಅಸಮಾಧಾನ ವ್ಯಕ್ತಪಡಿಸಿದರು.
31 ಶಾಲೆಗಳ ಜಾಗ ದಾನಿಗಳ ಹೆಸರಿನಲ್ಲಿದೆ:
ಇದೇ ಸಂದರ್ಭ ಮಾತನಾಡಿದ ಶಿಕ್ಷಣ ಇಲಾಖೆಯ ಸಮನ್ವ್ವಯ ಅಧಿಕಾರಿ ರಾಮಸ್ವಾಮಿ ಗೌಡ, ಸರಕಾರಿ ಶಾಲೆಗಳ ಆಸ್ತಿಯ ದಾಖಲೆಗಳ ವಿವರವನ್ನು ನೀಡಿದರು. ಮಡಿಕೇರಿ ತಾಲೂಕಿನಲ್ಲಿ 135 ಸರಕಾರಿ ಶಾಲೆಗಳಿದ್ದು, 61 ಶಾಲೆಗಳಿಗೆ ಆರ್‌ಟಿಸಿ ಆಗಿದೆ. 23 ಶಾಲೆಗಳ ಆರ್‌ಟಿಸಿ ಬದಲಾಗಬೇಕಿದೆ. ಶಾಲೆಗಳ ಕಡತಗಳು ವಿಲೇವಾರಿಗಾಗಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಉಳಿದಿದೆ. ಸುಮಾರು 31 ಶಾಲೆಗಳ ಜಾಗ ದಾನಿಗಳ ಹೆಸರಿನಲ್ಲಿರುವ ಕಾರಣ ಇದಕ್ಕೆ ಆರ್‌ಟಿಸಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ರಾಮೇಸ್ವಾಮಿ ಗೌಡ ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದರು.
ಮುಚ್ಚಲಾಗಿರುವ ಶಾಲಾ ಕಟ್ಟಡಗಳನ್ನು ಏನು ಮಾಡುತ್ತೀರಿ ಎಂದು ಸದಸ್ಯ ರಾಯ್ ತಮ್ಮಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ್ ಕಟ್ಟಡಗಳನ್ನು ಸ್ಥಳೀಯ ಗ್ರಾಪಂ ಗಳ ಅಧೀನಕ್ಕೆ ಒಳಪಡಿಸಿ ಸರಕಾರದ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದರು. ಶಾಲೆಗಳ ದುರಸ್ತಿಗೆ ಅನುದಾನದ ಕೊರತೆ ಇದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು. ಅಧ್ಯಕ್ಷೆ ತೆಕ್ಕಡೆ ಶೋಭಾ ಮಾತನಾಡಿ, ಅಧಿಕಾರಿಗಳು ಶಾಸಕರ ಸಹಕಾರ ಪಡೆದು ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.ತಾಪಂ ಉಪಾಧ್ಯಕ್ಷ ಸುಬ್ರಮಣಿ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಟಿ.ಎಂ ಜೀವನ್ ಕುಮಾರ್ ಉಪಸ್ಥಿತರಿದ್ದರು.