ಉದ್ಯೋಗ ಖಾತ್ರಿ ಯೋಜನೆ ಗುರಿಸಾಧನೆಗೆ ಸೂಚನೆ
ಚಿಕ್ಕಮಗಳೂರು, ಮೇ 25: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜನಸಾಮಾನ್ಯರಿಗೆ ಉದ್ಯೋಗ ನೀಡುವುದರೊಂದಿಗೆ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಸೃಷ್ಠಿಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅವರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಸಾಮಾಜಿಕ ಅರಣ್ಯ ಇಲಾಖೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಗುರಿ ನಿಗದಿಪಡಿಸಿದ್ದರೂ ಸಮರ್ಪಕವಾಗಿ ಗುರಿ ಮುಟ್ಟದಿರುವ ಕಾರಣ ಈ ಕುರಿತು ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ತೋಟಗಾರಿಕೆ, ರೇಷ್ಮೆ ಹಾಗೂ ಕೃಷಿ ಇಲಾಖೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಗುರಿ ನಿಗಧಿಪಡಿಸಿದ್ದರೂ ಹೆಚ್ಚಿನ ಪ್ರಗತಿ ಕಂಡು ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸು ನೀಡುವಂತೆ ಜಿಪಂ ಸಿಇಒಗಳಿಗೆ ಸೂಚಿಸಿದ ಅವರು, ಸರಕಾರದಿಂದ ಬಂದಿರುವ ಬೆಳೆ ನಷ್ಟದ ಪರಿಹಾರದ ಹಣದಲ್ಲಿ ಶೇ 15ರಷ್ಟು ಹಣ ವಿತರಣೆಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಉಪ ವಿಭಾಗಾಧಿಕಾರಿಗಳಿಂದ ಸಮರ್ಪಕ ಅನುಷ್ಠಾನಕ್ಕೆ ಸಾಧ್ಯವಾಗದಿರುವ ಕುರಿತು ಲಿಖಿತ ಉತ್ತರ ನೀಡುವಂತೆ ಸೂಚನೆ ನೀಡಿದರು.
ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ, ಕುಡಿಯುವ ನೀರಿನ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಈ ಸಂಬಂಧ ಮೆಸ್ಕಾಂ ಇಲಾಖೆ ಸಹ ಬಾಕಿ ಇರುವ ಯೋಜನೆಗಳಿಗೆ ಆದಷ್ಟು ಶೀಘ್ರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದರು.
ಸರಕಾರದ ಫಸಲ್ ಭೀಮಾ ಯೋಜನೆಯಡಿ ಬೆಳೆ ನಷ್ಟಕ್ಕೆ ವಿಮೆ ಸೌಲಭ್ಯ ಕಲ್ಪಿಸುವ ಈ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ. ಈ ಸಂಬಂಧ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರು ಮಾಹಿತಿ ಸಂಗ್ರಹಿಸಿ ಎಲ್ಲ ರೈತರಿಗೂ ಯೋಜನೆಯ ಲಾಭ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಪಿ.ಷಡಕ್ಷರಿ ಸ್ವಾಮಿ, ಜಿಪಂ ಸಿಇಒ ಡಾ. ಆರ್. ರಾಗಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾಮಟ್ಟದ ಅನುಷ್ಠಾನಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.