ಜಿಲ್ಲಾಸ್ಪತ್ರೆಯ ದುರವಸ್ಥೆ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ
ಚಿಕ್ಕಮಗಳೂರು, ಮೇ 25: ನಗರದಲ್ಲಿರುವ ಜಿಲ್ಲಾಸ್ಪತ್ರೆ ಹೆಸರಿಗೆ ಮಾತ್ರ ಜಿಲ್ಲಾಸ್ಪತ್ರೆಯಾಗಿದ್ದು, ಇಲ್ಲಿನ ವ್ಯವಸ್ಥೆ ಗ್ರಾಮೀಣ ಮಟ್ಟದ ಆಸ್ಪತ್ರೆಗಿಂತಲೂ ಹೀನಾಯ ಸ್ಥಿತಿ ತಲುಪಿದೆ. ಸದ್ಯವೇ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ದಲಿತ್ ಜನ ಸೇನಾ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ನುರಿತ ವೈದ್ಯರ ಮತ್ತು ದಾದಿಯರ ಕೊರತೆ ಇದ್ದು, ಇಲ್ಲಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸರಕಾರ ವಿಫಲವಾಗಿದೆ. ಆಸ್ಪತ್ರೆಯಲ್ಲಿ ತುರ್ತುನಿಗಾ ಘಟಕ ಮತ್ತು ಮಕ್ಕಳ ತುರ್ತುನಿಗಾ ಘಟಕಗಳಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯಿಲ್ಲ, 6 ಡಯಾಲಿಸಿಸ್ಸ್ ಯಂತ್ರಗಳಿದ್ದು, 1ಯಂತ್ರ ಹಾಳಾಗಿ ವರ್ಷಗಳೆ ಕಳೆದರೂ ದುರಸ್ಥಿ ಕಂಡಿಲ್ಲ ಎಂದು ದೂರಿದರು.
ರೋಗಿಗಳು ಪಕ್ಕದ ಹಾಸನ ಅಥವಾ ಮಂಗಳೂರು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಚಿಕಿತ್ಸೆಯನ್ನು ಅವಲಂಬಿಸುವಂತಾಗಿದೆ. ಇಲ್ಲಿನ ವೈದ್ಯರು ಕೂಡ ಯಾವುದೇ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದರೂ ಹಾಸನ, ಮಂಗಳೂರು ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮೂಲಭೂತ ವ್ಯವಸ್ಥೆಗಳಾದ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಅಧೋಗತಿ ತಲುಪಿದ್ದು, ಆಸ್ಪತ್ರೆ ಆವರಣದಲ್ಲಿ ಪ್ರತ್ಯೇಕ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು. ಈ ಎಲ್ಲ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ಹಿರೇಮಗಳೂರು, ಮಹಿಳಾ ಜಿಲ್ಲಾಧ್ಯಕ್ಷೆ ಸ್ವರ್ಣಗೌರಿ, ಸಮಾಜ ಸೇವಕ ಜಿ.ಸಿ.ಸಿಪಾನಿ, ಯುವ ಘಟಕದ ಅಧ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷ ಜೆ.ಸತ್ಯನಾರಾಯಣ, ರಿಪಬ್ಲಿಕನ್ ಸೇನೆ ಜಿಲ್ಲಾಧ್ಯಕ್ಷ ಹಾಂದಿ ಲಕ್ಷ್ಮಣ್, ಕಾರ್ಗಿಲ್ ಯುವ ಪಡೆ ಅಧ್ಯಕ್ಷ ಕಾರ್ಗಿಲ್ ಸೋಮಶೇಖರ್, ಕಾರ್ಯದರ್ಶಿ ವಿದ್ಯಾರ್ಥಿ ಘಟಕದ ಅಮಿತ್‌ಕುಮಾರ್, ಪುನಿತ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶರತ್‌ಕುಮಾರ್, ವಿದ್ಯಾರ್ಥಿ ಘಟಕದ ಉಪಾಧ್ಯಕ್ಷರಾದ ಯೋಗಿತ್, ಸಚಿನ್, ರಾಖೇಶ್, ಪವನ್, ವಿಜಯ್, ಸ.ಕಾರ್ಯದರ್ಶಿಗಳಾದ ಮಲ್ಲಿಕ್‌ಕುಮಾರ್, ಅರುಣ್‌ಕುಮಾರ್, ದೇವು, ಚೇತನ್‌ಕುಮಾರ್, ಮೋಹನ್, ಸದಸ್ಯರಾದ ಸುನಿಲ್, ಮಂಜುನಾಥ್, ಮಂಜು, ಶ್ರೀನಿವಾಸ್, ಸಂಜು, ಗೌತಮ್ ಮತ್ತಿತರರು ಉಪಸ್ಥಿತರಿದ್ದರು.