116 ಕೋಟಿ ರೂ. ಯೋಜನೆಗೆ ಅನುಮೋದನೆ: ಸಚಿವ ಎ.ಮಂಜು
ಮಡಿಕೇರಿ,ಮೇ 25: ಹಾರಂಗಿ ನಾಲೆಯ ಉಪ ವಿಭಾಗ ವ್ಯಾಪ್ತಿಯಲ್ಲಿನ ಎಡದಂಡೆ ನಾಲೆ ಆಧುನೀಕರಣಕ್ಕೆ 116 ಕೋಟಿ ರೂ. ವೆಚ್ಚದ ಯೋಜನೆಗೆ ಸರಕಾರ ಅನುಮೋದನೆ ನೀಡಿದೆ ಎಂದು ಪಶುಪಾಲನೆ ಮತ್ತು ರೇಷ್ಮೆ ಸಚಿವರಾದ ಎ.ಮಂಜು ಅವರು ತಿಳಿಸಿದ್ದಾರೆ. ಕುಶಾಲನಗರ ಬಳಿಯ ಹಾರಂಗಿ ಜಲಾಶಯದ ಸಭಾಂಗಣದಲ್ಲಿ ಹಾರಂಗಿ ನಾಲೆಯ ಉಪ ವಿಭಾಗದ ಅಧಿಕಾರಿಗಳ ಜೊತೆ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಸಚಿ ವರು ಮಾಹಿತಿ ನೀಡಿದರು.
ಹಾರಂಗಿ ನಾಲೆಯ ಉಪ ವಿಭಾಗ ವ್ಯಾಪ್ತಿಯ ಬಯಲು ಸೀಮೆ ಪ್ರದೇಶಗಳ ನಾಲೆಗಳಿಗೆ ನೀರು ಪೂರೈಕೆ ಮಾಡುವ ಯೋಜನೆಗೆ ಸರಕಾರ ಒಪ್ಪಿಗೆ ನೀಡಿದೆ. ಹಾರಂಗಿ ನಾಲೆಯ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಅರಕಲಗೋಡು ತಾಲೂಕಿನ ಬಸವಪಟ್ಟಣದ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆ ಹಾಗೂ ಬಸವನಹಳ್ಳಿ ಕೆರೆ, ಹಂಪಾಪುರ ಕೆರೆ, ಲಕ್ಕೂರು ಕೆರೆಗಳಲ್ಲಿ ಹೂಳು ತೆಗೆದು ಮಳೆಗಾಲದ ಅವಧಿಯಲ್ಲಿ ನೀರು ತುಂಬಿಸಲು ಯೋಜನೆ ರೂಪಿಸುವಂತೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಎ.ಮಂಜು ಅವರು ನೀರಾವರಿ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕುಶಾಲನಗರ ಬಳಿಯ ಹಾರಂಗಿ ಜಲಾಶಯದ ಸಭಾಂಗಣದಲ್ಲಿ ಹಾರಂಗಿ ನಾಲೆಯ ಉಪ ವಿಭಾ ಗದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೂನ್ ತಿಂಗಳಲ್ಲಿ ಮಳೆ ಆರಂಭವಾಗುವುದರಿಂದ ಅದಕ್ಕೂ ಮೊದಲು ಕೆರೆಯಲ್ಲಿ ಹೂಳು ತೆಗೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಎಸ್‌ಸಿಪಿ ಯೋಜನೆಯಡಿ ಹಣವಿದ್ದರೂ ಖರ್ಚು ಮಾಡಿಲ್ಲ. ಟೆಂಡರ್ ಆಗಿದ್ದರೂ ಕೆಲಸ ಮಾಡಿಲ್ಲ. ಎಸ್‌ಸಿಪಿ ಯೋಜನೆಯಡಿ ಹಣ ಖರ್ಚು ಮಾಡದಿದ್ದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಧಿಕಾರಿಗಳು ರೈತ ಪರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಸರಕಾರ ಕ್ಷಿರಭಾಗ್ಯ ಯೋಜನೆಯಡಿ ವಾರದಲ್ಲಿ 6 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಹಾಲು ವಿತರಿಸಲು ಚಿಂತನೆ ನಡೆಸಿದೆ. ಆ ದಿಸೆಯಲ್ಲಿ ಹಾಲಿನ ಪೌಡರ್ ಬದಲಾಗಿ ಸಂಸ್ಕರಿಸಿದ ಹಾಲನ್ನು ನೇರವಾಗಿ ಪೂರೈಕೆ ಮಾಡಲು ಯೋಚಿಸಲಾಗುತ್ತಿದೆ ಎಂದು ಪಶುಸಂಗೋಪನೆ ಸಚಿವರಾದ ಎ.ಮಂಜು ಅವರು ತಿಳಿಸಿದ್ದಾರೆ. ಪಶುಪಾಲನಾ ಇಲಾಖೆಯ ಆಯುಕ್ತರಾದ ಶಂಕರ್, ಜಂಟಿ ನಿರ್ದೇಶಕರಾದ ಡಾ.ರಾಮಚಂದ್ರ, ಉಪ ನಿರ್ದೇಶಕರಾದ ಡಾ. ನಾಗರಾಜು, ಹಾರಂಗಿ ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ರಂಗಸ್ವಾಮಿ, ಎಇಇಗಳಾದ ಶಿವಕುಮಾರ್, ಧರ್ಮರಾಜು, ಎಇ ವೆಂಕಟೇಶ್, ರಾಜೇಗೌಡ, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಯ್ಯ, ರೇಷ್ಮೆ ಇಲಾಖೆ ಉಪ ನಿರ್ದೇಶಕರಾದ ನಿರ್ಮಲ ಉಪಸ್ಥಿತರಿದ್ದರು.
ಮಿಲ್ಕ್ ಮತ್ತು ಶಿಲ್ಕ್ ಯೋಜನೆಗೆ ತಯಾರಿ: ರೈತರ ಆರ್ಥಿಕ ಸಬಲತೆಗೆ ಪಶುಪಾಲನೆ ಮತ್ತು ರೇಷ್ಮೆ ಇಲಾಖೆ ವತಿಯಿಂದ ಹತ್ತು ಅಂಶದ ಸೂತ್ರಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಆ ನಿಟ್ಟಿನಲ್ಲಿ ಮಿಲ್ಕ್ ಮತ್ತು ಶಿಲ್ಕ್ ಯೋಜನೆ ರೂಪಿಸಲು ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಹಾಲಿನಿಂದ ಪ್ರತಿನಿತ್ಯ ಹಣ ಗಳಿಸಬಹುದಾದರೆ, ಶಿಲ್ಕ್‌ನಿಂದ ಪ್ರತಿ ತಿಂಗಳು ಹಣ ಪಡೆಯಬಹುದಾಗಿದೆ ಎಂದರು.
ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ ಆಡಿನ ಹಾಲು ಹೆಚ್ಚಿನ ಉಪಯುಕ್ತವೆಂದು ಹೇಳಲಾಗುತ್ತಿದೆ. ಆದ್ದರಿಂದ ಒಂದು ಹಸು ಸಾಕಣೆಗೆ ಮಾಡುವುದು ಹತ್ತು ಮೇಕೆ ಸಾಕಣೆಗೆ ಸಮವಾಗಿದೆ. ಹಾಗೆಯೇ ಕುರಿ ಮತ್ತು ಆಡು ಮಾಂಸಕ್ಕೂ ಹೆಚ್ಚಿನ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಆಡು ಹಾಗೂ ಕುರಿ ಸಾಕಣೆಗೆ ಉತ್ತೇಜನ ನೀಡಲು ಸರಕಾರ ಮುಂದಾಗಿದೆ ಎಂದರು. 108 ಮಾದರಿಯಲ್ಲಿ ತುರ್ತು ಚಿಕಿತ್ಸೆ: ಆರೋಗ್ಯ ಕವಚ 108 ಮಾದರಿಯಲ್ಲಿ ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಪಶುಪಾಲನಾ ಇಲಾಖೆ ಚಿಂತನೆ ಮಾಡಿದೆ ಎಂದು ಸಚಿವರು ಹೇಳಿದರು.
ಹಾಸನ ಹಾಗೂ ಮೈಸೂರು ಹಾಲು ಒಕ್ಕೂಟ ವ್ಯಾಪ್ತಿಯಲ್ಲಿನ ಶಾಲೆಗಳಿಗೆ ವಾರದಲ್ಲಿ 6 ದಿನಗಳ ಕಾಲ ಸಂಸ್ಕರಿಸಿದ ಹಾಲನ್ನು ನೇರವಾಗಿ ವಿತರಿಸುವ ಪೈಲೆಟ್ ಯೋಜನೆಯನ್ನು ಪ್ರಥಮ ಹಂತದಲ್ಲಿ ರೂಪಿಸಲಾಗುತ್ತಿದ್ದು, ನಂತರದ ರಾಜ್ಯದ ಎಲ್ಲಾ ಹಾಲು ಒಕ್ಕೂಟ ವ್ಯಾಪ್ತಿಗೆ ವಿಸ್ತರಿಸಲು ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.
ರೇಷ್ಮೆ ಬೆಳೆಯಲು 100 ಎಕರೆ ಗುರಿ ::
ಜಿಲ್ಲೆಯಲ್ಲಿ ರೇಷ್ಮೆ ಬೆಳೆಯುವ ಪ್ರದೇಶ ಕ್ಷೀಣಿಸಿದ್ದು, ಕೇವಲ 31 ಎಕರೆ ಪ್ರದೇಶದಲ್ಲಿ ಮಾತ್ರ ರೇಷ್ಮೆ ಬೆಳೆ ಬೆಳೆಯಲಾಗುತ್ತಿದೆ. ಇದನ್ನು ಕನಿಷ್ಠ 100 ಎಕರೆ ಪ್ರದೇಶದಲ್ಲಾದರೂ ರೇಷ್ಮೆ ಬೆಳೆಯನ್ನು ಅಭಿವೃದ್ಧಿ ಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ರೇಷ್ಮೆ ಸಚಿವರಾದ ಎ.ಮಂಜು ಅವರು ಸೂಚನೆ ನೀಡಿದರು.