ಒತ್ತುವರಿ ಕೆರೆಗಳತ್ತ ಚಿತ್ತ ಹರಿಸದ ಜಿಲ್ಲಾಡಳಿತ

Update: 2016-05-25 16:45 GMT

ಶಿವಮೊಗ್ಗ, ಮೇ 25: ಸಂಘಟನೆಗಳಿಂದ ವ್ಯಕ್ತ ವಾದ ಭಾರೀ ಒತ್ತಡದ ನಂತರ ಜಿಲ್ಲಾಡಳಿತ ಕೊನೆಗೂ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಅವ್ಯಾ ಹತವಾಗಿ ನಡೆದಿರುವ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಕಳೆದ ನಾಲ್ಕು ದಿನಗಳಿಂದ ನಗರದ ವಿವಿಧೆಡೆ ಎಡಬಿಡದೆ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಸ್ವತಃ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಸೇರಿದಂತೆ ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯ ಖುದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಪ್ರಸ್ತುತ ಜಿಲ್ಲಾಡಳಿತ ನಡೆಸುತ್ತಿರುವ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಗಮನಿಸಿದರೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರದಂತೆ ಕಾಣುತ್ತಿದೆ. ನಗರದ ಹಲವೆಡೆ ಪ್ರಭಾವಿಗಳು, ಸಂಘ ಸಂಸ್ಥೆಗಳು ಮಾಡಿಕೊಂಡಿರುವ ಕೆರೆ ಒತ್ತುವರಿ ತೆರವುಗೊಳಿಸುವತ್ತ ಗಮನ ಹರಿಸುತ್ತಿಲ್ಲ ಎಂದು ಕೆರೆ ಸಂರಕ್ಷಣೆಯ ಪರವಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಳು ಆಪಾದಿಸುತ್ತಿವೆ.

ಮತ್ತೊಂದೆಡೆ ಸಂಘಟನೆಗಳ ಆರೋಪ ದೃಢಪಡಿಸುವಂತೆ ನಗರದ ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಪುರಲೆ, ನಿಧಿಗೆ, ಸಹ್ಯಾದ್ರಿ ನಗರದ ದೇವರಾಜ ಅರಸು ಬಡಾವಣೆಗಳಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳು ಮಾಡಿಕೊಂಡಿರುವ ಕೆರೆ ಒತ್ತುವರಿ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿಲ್ಲ. ಪ್ರಸ್ತುತ ಜಿಲ್ಲಾಡಳಿತ ಸಿದ್ಧ್ದಪಡಿಸಿಟ್ಟುಕೊಂಡಿರುವ ಕೆರೆಗಳ ಒತ್ತುವರಿ ಪಟ್ಟಿ ಯಲ್ಲಿ ಮೇಲ್ಕಂಡ ಪ್ರದೇಶಗಳ ಕೆರೆಗಳು ಇಲ್ಲವೆಂದು ಹೇಳಲಾಗುತ್ತಿದೆ. ಕೆರೆ ಒತ್ತುವರಿ ತೆರವುಗೊಳಿಸುವಂತೆ ಹೋರಾಟ ನಡೆಸುತ್ತಿರುವ ಅಣ್ಣಾ ಹಝಾರೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಂ.ಅಶೋಕ್ ಯಾದವ್‌ರವರು, ಪ್ರಸ್ತುತ ಜಿಲ್ಲಾಡಳಿತ ನಡೆಸುತ್ತಿರುವ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೊಂದು ಕಣ್ಣೊರೆಸುವ ತಂತ್ರವಾಗಿದೆ ಎಂದು ಟೀಕಿಸಿದ್ದಾರೆ. ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾ ರರೊಂದಿಗೆ ಅವರು ಮಾತನಾಡಿದರು. ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಪುರಲೆ ಮೊದಲಾದ ಭಾಗಗಳಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಕೆರೆ ಒತ್ತುವರಿ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಗಾಡಿಕೊಪ್ಪದಲ್ಲಿ ಜಿಲ್ಲಾಧಿಕಾರಿಗಳು ಗೌರವಾಧ್ಯಕ್ಷರಾಗಿರುವ ಕ್ಲಬ್‌ವೊಂದಕ್ಕೆ ಕೆರೆಯನ್ನು ವಾರ್ಷಿಕ ಲೀಸ್ ಆಧಾರದ ಮೇಲೆ ನೀಡಲಾಗಿದೆ. ಹೆಲ್ತ್ ಕ್ಲಬ್ ಮಾಡುವುದಾಗಿ ಲೀಸ್ ಪಡೆದ ಕ್ಲಬ್ ಇದೀಗ ಮದ್ಯ ಮಾರಾಟ ಮಾಡುತ್ತಿದೆ.  ನಿಜವಾಗಿಯೂ ಜಿಲ್ಲಾಧಿಕಾರಿಗಳಿಗೆ ಕೆರೆ ಸಂರಕ್ಷಣೆಯ ಬಗ್ಗೆ ಕಾಳಜಿಯಿದ್ದರೆ ಮೊದಲು ಅವರು ಗೌರವಾಧ್ಯಕ್ಷರಾಗಿರುವ ಕೆರೆಯಲ್ಲಿ ನಿರ್ಮಿಸಿರುವ ಕ್ಲಬ್ ಕಟ್ಟಡವನ್ನು ತೆರವುಗೊಳಿಸಲಿ. ಈ ಕೆರೆಯ ಸಂರಕ್ಷಣೆಗೆ ಒತ್ತು ನೀಡಲಿ.

<ಗಾಡಿಕೊಪ್ಪದಲ್ಲಿ ಅವ್ಯಾಹತವಾಗಿ ಕೆರೆಗಳ ಒತ್ತುವರಿ ಮಾಡಲಾಗಿದೆ. ನಾಗರಿಕರಿಗೆ ಸಾಕಷ್ಟು ಅನುಕೂಲವಾಗಿದ್ದ ಕೆರೆಯಲ್ಲಿ ಕ್ಲಬ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಈ ಕೆರೆಯ ಜಾಗವನ್ನು ಅನಧಿಕೃತವಾಗಿ ಖಾಸಗಿ ವ್ಯಕ್ತಿಗಳು ಅವ್ಯಾಹತವಾಗಿ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಮನೆ ನಿರ್ಮಿಸುತ್ತಿದ್ದಾರೆ. ಹಾಗೆಯೇ ಗಾಡಿಕೊಪ್ಪದ ಮತ್ತೊಂದು ಕಡೆಯಿರುವ ಕೆರೆಯಲ್ಲಿ ಸರಕಾರಿ ಇಲಾಖೆಯ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇನ್ನೊಂದೆಡೆ ಗಾಡಿಕೊಪ್ಪದಲ್ಲಿರುವ ಕೆಲ ಕೆರೆಗಳನ್ನು ಸ್ಥಳೀಯ ಭೂಗಳ್ಳರು ಕಬಳಿಸಿ ನಿವೇಶನ ಮಾಡಿ ಹಂಚಿಕೆ ಮಾಡಿದ್ದಾರೆ. ಇತ್ತೀಚೆಗೆ ಜಿಲ್ಲಾಡಳಿತವು ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಆದರೆ ನಮ್ಮ ಗ್ರಾಮದಲ್ಲಿ ಆಗಿರುವ ಪ್ರಮುಖ ಕೆರೆಗಳ ಒತ್ತುವರಿ ತೆರವಿಗೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನಹರಿಸಬೇಕಾಗಿದೆ. ಗಾಡಿಕೊಪ್ಪದ ನಿವಾಸಿಗಳು

ಪುರಲೆ, ನಿಧಿಗೆ, ಮಲ್ಲಿಗೇನಹಳ್ಳಿ ಗ್ರಾಮಗಳಲ್ಲಿರುವ ಕೆರೆಗಳನ್ನು ಕೂಡ ಪ್ರಭಾವಿಗಳು ಕಬಳಿಸಿದ್ದಾರೆ. ಕಟ್ಟಡ, ಲೇಔಟ್, ಜಮೀನು ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಈ ಕೆರೆಗಳ ಒತ್ತುವರಿ ತೆರವಿಗೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಜಿಲ್ಲಾಡಳಿತಕ್ಕೆ ನಿಜವಾಗಿಯೂ ಕಾಳಜಿಯಿದ್ದರೆ ಗಾಡಿಕೊಪ್ಪ, ಪುರಲೆ, ನಿಧಿಗೆ, ಮಲ್ಲಿಗೇನಹಳ್ಳಿ ಗ್ರಾಮಗಳಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳು ಮಾಡಿಕೊಂಡಿರುವ ಕೆರೆ ಒತ್ತುವರಿ ತೆರವುಗೊಳಿಸಲಿ.

 <ಕೆರೆ ಸಂರಕ್ಷಣೆ ಹೋರಾಟ ನಡೆಸುತ್ತಿರುವ ಮುಖಂಡರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News