ಶಿವಮೊಗ್ಗ ರೌಡಿಯ ಹತ್ಯೆ ಪ್ರಕರಣ 6 ಮಂದಿ ಬಂಧನ
ಶಿವಮೊಗ್ಗ, ಮೇ 25: ಇತ್ತೀಚೆಗೆ ಶಿವಮೊಗ್ಗ ನಗರದ ಬಸವನಗುಡಿಯಲ್ಲಿ ರೌಡಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಚಿಕ್ಕಮಗಳೂರು ಜಿಲ್ಲೆಯ ಬೀರೂರು ತಾಲೂಕಿನಲ್ಲಿ ಆರು ಜನ ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸವನಗುಡಿ ಬಡಾವಣೆಯ ನಿವಾಸಿಯಾದ ರೌಡಿ ಶೀಟರ್ ದೇವರಾಜ ಯಾನೆ ಕುಟಿಯಾ (26), ಈತನ ಸಹೋದರ ಕುಮಾರ ಯಾನೆ ನಜೀರ (23), ಮಾವ ಪ್ರಕಾಶ ಯಾನೆ ಗಾಂಧಿ (39), ಸುನೀಲ (21), ಈತನ ಸಹೋದರ ಸುರೇಶ ಯಾನೆ ಗುಂಡಾ (20) ಹಾಗೂ ಮಂಜುನಾಥ ಯಾನೆ ಭಂಡಾರಿ (19) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಬೀರೂರಿನಲ್ಲಿ ಅಡಗಿ ಕುಳಿತಿದ್ದ ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಇ
್ಸ್ಪೆಕ್ಟರ್‌ಗಳಾದ ದೀಪಕ್, ಟಿ.ಕೆ.ಚಂದ್ರಶೇಖರ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಎನ್.ಎಸ್.ರವಿ, ಗುರುರಾಜ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹತ್ಯೆ ಮಾಡಲಾಗಿತ್ತು: ಸೋಮವಾರ ರಾತ್ರಿ ನಗರದ ಬಸವನಗುಡಿ ಬಡಾವಣೆಯ 1 ನೆ ತಿರುವಿನಲ್ಲಿ ರೌಡಿ ಶೀಟರ್ ಜಗ್ಗ ಯಾನೆ ಓಲೆ ಜಗ್ಗ (30) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪೈಂಟಿಂಗ್ ಕೆಲಸ ಮಾಡುತ್ತಿದ್ದ ಜಗ್ಗ ಕೃಷಿ ನಗರ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಕಳೆದ ಸುಮಾರು ಒಂದು ವರ್ಷದ ಹಿಂದಷ್ಟೆ ವಿವಾಹವಾಗಿದ್ದ. ಸೋಮವಾರ ಸಂಜೆ ಜಗ್ಗನ ಮೊಬೈಲ್‌ಗೆ ಕರೆಯೊಂದು ಬಂದಿದ್ದು, ಮನೆಯಿಂದ ಹೊರ ಬಂದಿದ್ದಾನೆ. ಬಸವನಗುಡಿಗೆ ಆಗಮಿಸಿದ್ದ ಆತನನ್ನು ಗುಂಪೊಂದು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ನಡೆಸಿ ಪರಾರಿಯಾಗಿತ್ತು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈಯಕ್ತಿಕ ದ್ವೇಷ
: ಹತ್ಯೆಗೀಡಾದ ಜಗ್ಗ ಹಾಗೂ ಪ್ರಸ್ತುತ ಬಂಧಿತರಾಗಿರುವ ರೌಡಿ ಶೀಟರ್ ದೇವರಾಜ್ ಮತ್ತು ಇತರೆ ಆರೋಪಿಗಳು ಪರಿಚಯಸ್ಥರಾಗಿದ್ದಾರೆ. ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಇವರುಗಳ ನಡುವೆ ಜಗಳವಾಗಿತ್ತು. ವೈಷಮ್ಯವಿತ್ತು. ಈ ಹಿನ್ನೆಲೆಯಲ್ಲಿಯೇ ಆರೋಪಿಗಳು ಸಂಚು ನಡೆಸಿ ಜಗ್ಗನ ಹತ್ಯೆ ನಡೆಸಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ನಾಯಿಗೆ ಕಲ್ಲು ಹೊಡೆದಿದ್ದಕ್ಕೆ ಕೊಲೆಯಾದ: ಆರೋಪಿ ಸುನೀಲನ ಮನೆಯಲ್ಲಿ ನಾಯಿ ಯೊಂದನ್ನು ಸಾಕಲಾಗಿದೆ. ಹತ್ಯೆಗೀಡಾದ ರೌಡಿ ಶೀಟರ್ ಜಗ್ಗನು ಇತ್ತೀಚೆಗೆ ಆರೋಪಿಯ ಮನೆಯ ಬಳಿ ಹೊಗುವಾಗ ನಾಯಿಯು ಬೊಗುಳಿದೆ. ಇದರಿಂದ ಕುಪಿತಗೊಂಡ ಜಗ್ಗನು ನಾಯಿಗೆ ಕಲ್ಲು ಹೊಡೆದಿದ್ದ. ಮೊದಲೇ ಜಗ್ಗನ ವಿರುದ್ಧ್ದ ಆರೋಪಿಗಳು ಕಿಡಿಕಾರುತ್ತಿದ್ದರು. ಆತನು ನಾಯಿಗೆ ಕಲ್ಲು ಹೊಡೆದಿದ್ದು ಆರೋಪಿಗಳನ್ನು ಮತ್ತಷ್ಟು ರೊಚ್ಚಿಗೇಳುವಂತೆ ಮಾಡಿತ್ತು. ಆತನನ್ನು ಹತ್ಯೆ ಮಾಡಲು ನಿರ್ಧರಿಸಿದ್ದ ಆರೋಪಿಗಳೆಲ್ಲರೂ ಸೋಮವಾರ ಸಂಜೆ ಬಸವನಗುಡಿ 1 ನೆ ತಿರುವಿಗೆ ಜಗ್ಗನನ್ನು ಕರೆಯಿಸಿ ಕೊಂಡಿದ್ದಾರೆ. ಮೊದಲೇ ನಿರ್ಧರಿಸಿದ್ದಂತೆ ಆರೋಪಿಗಳೆಲ್ಲರೂ ಮಾರಕಾಸ್ತ್ರಗಳಿಂದ ಜಗ್ಗನನ್ನು ಮನಸೋ ಇಚ್ಚೆ ಕೊಚ್ಚಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ಮಾಹಿತಿ ನೀಡಿದ್ದಾರೆ