×
Ad

‘ಸಾಗರ ಬರಪೀಡಿತ ಪ್ರದೇಶವಾಗಿ ಘೋಷಿಸಿ’

Update: 2016-05-25 22:21 IST

ಸಾಗರ, ಮೇ 25: ಕಳೆದ ಸಾಲಿನಲ್ಲಿ ವಾಡಿಕೆಗಿಂತ ಮಳೆ ತೀರ ಕಡಿಮೆಯಾದ ಹಿನ್ನೆಲೆಯಲ್ಲಿ ಸಾಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವ ಜೊತೆಗೆ ಪರಿಹಾರ ಕಾಮಗಾರಿ ಕೈಗೊಳ್ಳಲು ಹೆಚ್ಚಿನ ಹಣಕಾಸು ನೆರವು ನೀಡುವಂತೆ ಸರಕಾರಕ್ಕೆ ಮನವಿ ನೀಡುವ ಬಗ್ಗೆ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಬುಧವಾರ ನಡೆದ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸದಸ್ಯೆ ಜ್ಯೋತಿ ಮುರಳೀಧರ್, ಕಳೆದ 40 ವರ್ಷಗಳಲ್ಲಿ ನಾವು ಇಂತಹ ಸ್ಥಿತಿಯನ್ನು ನೋಡಿರಲಿಲ್ಲ. ವಿಪರೀತ ಬಿಸಿಲಿನಿಂದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಸಾವಿರಾರು ಎಕರೆ ಅಡಿಕೆ ತೋಟಗಳು ಬಿಸಿಲಿನ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರ ಬರಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಸಹಾಯಧನ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸದಸ್ಯ ಕಲಸೆ ಚಂದ್ರಪ್ಪಮಾತನಾಡಿ, ಕಳೆದ ಸಾಲಿನಲ್ಲಿ ಮಳೆ ಕೊರತೆಯಿಂದ ಕಂಗಾಲಾಗಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದವಾರ ಸುರಿದ ಗಾಳಿಮಳೆಯಿಂದ ಮನೆ, ಜಮೀನು ನಾಶವಾಗಿದೆ. ಎಲ್ಲವನ್ನೂ ಕಳೆದುಕೊಂಡಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ತಾಲೂಕು ಪಂಚಾಯತ್ ಸಭೆಯಲ್ಲಿ ಬರಪೀಡಿತ ತಾಲೂಕು ಎಂದು ನಿರ್ಣಯ ಕೈಗೊಳ್ಳುವ ಜೊತೆಗೆ ಹೆಚ್ಚಿನ ಅನುದಾನ ಕಲಿಸುವಂತೆ ಸರಕಾರಕ್ಕೆ ಪತ್ರ ಬರೆಯುವಂತೆ ಸಭೆಯನ್ನು ಒತ್ತಾಯಿಸಿದರು. ಸದಸ್ಯೆ ಪ್ರಭಾವತಿ ಚಂದ್ರಕಾಂತ್ ಮಾತನಾಡಿ, ತಲವಾಟ ಕ್ಷೇತ್ರವ್ಯಾಪ್ತಿಯಲ್ಲಿ ವಿಪರೀತ ಬಿಸಿಲಿನಿಂದ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ತಕ್ಷಣ ಆಡಳಿತ ಸಮಿತಿ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಉತ್ತರಿಸಿದ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ತಾಲೂಕಿನಲ್ಲ 35 ಗ್ರಾಮ ಪಂಚಾಯತ್‌ಗಳಲ್ಲಿಯೂ ಬರದ ಭೀಕರತೆ ಇದೆ. ಅನೇಕ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು ಹಾಗೂ ಜಿಲ್ಲಾ ಪಂಚಾಯತ್‌ಗೆ ಮನವಿ ಮಾಡಲಾಗಿದೆ. ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಮತ್ತೊಮ್ಮೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಅರ್ಜಿ ಪರಿಶೀಲನೆ ನೆಪದಲ್ಲಿ ಬಡವರಿಂದ ಹಣ ಸುಲಿಗೆ ನಡೆಸಲಾಗುತ್ತಿದೆ ಎಂದು ದೂರಿದ ಸದಸ್ಯೆ ಜ್ಯೋತಿ ಮುರಳೀಧರ್, ಶಿಕ್ಷಣ ಸಂಯೋಜಕರೊಬ್ಬರು ಹಣ ಪಡೆಯುತ್ತಿರುವ ಬಗ್ಗೆ ದೃಶ್ಯಮಾಧ್ಯಮದಲ್ಲಿ ವರದಿ ಪ್ರಕಟವಾಗಿದೆ. ನಿಮ್ಮ ಕಚೇರಿಯಲ್ಲಿಯೇ ಇಂತಹ ಭ್ರಷ್ಟಾಚಾರ ನಡೆಯುತ್ತಿದ್ದರೂ ನೀವು ಮೌನವಾಗಿರುವುದನ್ನು ಗಮನಿಸಿದರೆ ಪ್ರಕರಣದಲ್ಲಿ ನಿಮ್ಮ ಪಾತ್ರವೇನು ಎಂದು ಪ್ರಶ್ನಿಸಿದರು. ಆರೋಪ ನಿರಾಕರಿಸಿ ಮಾತನಾಡಿದ ಅಧ್ಯಕ್ಷ ಹಕ್ರೆ, ಈ ಹಿಂದೆಯೆ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯನ್ನು ನಿಮ್ಮ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಕುರಿತು ಪ್ರಸ್ತಾಪಿಸಲಾಗಿದೆ. ಲಂಚ ಪಡೆದು ಕಡ್ಡಾಯ ಶಿಕ್ಷಣ ನೀತಿಯನ್ನು ದುರುಪಯೋಗಪಡಿಸಿ ಕೊಂಡ ಆರೋಪಿ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಜರಗಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಖಾಸಗಿ ಶಾಲಾ ಕಾಲೇಜುಗಳಲ್ಲಿ ನಿಯಮಬಾಹಿರವಾಗಿ ಶುಲ್ಕ ವಸೂಲಿ ಮಾಡುತ್ತಿರುವುದು, ಶಾಲೆ ತೆರೆಯಲು ಅನುಮತಿ ಪಡೆದು, ಮೂಲಸೌಲಭ್ಯಗಳನ್ನು ಕಲ್ಪಿಸದೆ ಇರುವ ಶಾಲೆ ಕಾಲೇಜುಗಳ ವಿರುದ್ಧ ಕ್ರಮ ಜರಗಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಪರಶುರಾಮ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿದ್ದಲಿಂಗಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News