ಪದಾಧಿಕಾರಿಗಳ ಜಾತಿಯ ಹೆಸರು ಸಹಿತ ರಾಜ್ಯ ಬಿಜೆಪಿ ನೂತನ ಪಟ್ಟಿ ಪ್ರಕಟ !
ಬೆಂಗಳೂರು, ಮೇ 26 : ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂದು ಹೇಳುವ ಸಂಘ ಪರಿವಾರದ ರಾಜಕೀಯ ಪಕ್ಷ , ಸದಾ ಹಿಂದೂಗಳ ಒಗ್ಗಟ್ಟಿನ ಮಂತ್ರ ಪಠಿಸುವ ಬಿಜೆಪಿಯ ಕರ್ನಾಟಕ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರು ಗುರುವಾರ ಪ್ರಕಟಿಸಿದ್ದಾರೆ. ಆದರೆ ವಿಶೇಷವೆಂದರೆ ಇದರಲ್ಲಿ ಪದಾಧಿಕಾರಿಗಳ ಹೆಸರಿನ ಜೊತೆಗೇ ಅವರ ಜಾತಿಯನ್ನೂ ಉಲ್ಲೇಖಿಸಲಾಗಿದೆ !
ಮಾಧ್ಯಮಗಳಿಗೆ ಈ ಪಟ್ಟಿಯನ್ನು ಪ್ರಕಟಿಸಲು ಯಡಿಯೂರಪ್ಪನವರು ಬರೆದ ಇಂಗ್ಲೀಷ್ ನಲ್ಲಿರುವ ಪತ್ರ ಹಾಗು ಪಟ್ಟಿಯನ್ನು ಮೈಸೂರು ಸಂಸದ , ರಾಜ್ಯ ಯುವ ಮೋರ್ಚಾ ನೂತನ ಅಧ್ಯಕ್ಷ ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಹಾಕಿದ್ದಾರೆ ( ಪ್ರತಿ ಕೆಳಗಿದೆ). ಅಲ್ಲಿಯೂ ಜನರು ಈ ಜಾತಿ ಆಧಾರಿತ ಪಟ್ಟಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹತ್ತು ಉಪಾಧ್ಯಕ್ಷರು, ಐದು ಪ್ರಧಾನ ಕಾರ್ಯದರ್ಶಿಗಳು ಹಾಗು ಹತ್ತು ಕಾರ್ಯದರ್ಶಿಗಳ ಪಟ್ಟಿಯಲ್ಲಿ ಪ್ರತಿಯೊಬ್ಬರ ಹೆಸರಿನ ಬಳಿಕ ಅವರ ಆವರಣದಲ್ಲಿ ( ಬ್ರಾಕೆಟ್) ಅವರ ಜಾತಿ ಹೆಸರನ್ನು ನಮೂದಿಸಲಾಗಿದೆ. ಬಳಿಕ ಅವರ ಊರ ಹೆಸರನ್ನು ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗು ಬಿಜೆಪಿಯ ವರಿಷ್ಠರು ಸದಾ ಹಿಂದೂ ಐಕ್ಯತೆಯ ಮಾತನಾಡುತ್ತಾರೆ. ಕಾಂಗ್ರೆಸ್ ಮತ್ತಿತರ ಪಕ್ಷಗಳು ಜಾತಿ ರಾಜಕಾರಣ ಮಾಡಿ ಹಿಂದೂಗಳನ್ನು ವಿಭಜಿಸುತ್ತಿವೆ ಎಂದು ದೂರುತ್ತಾರೆ. ಪ್ರಧಾನಿಯನ್ನು ಹಿಂದೂ ಹೃದಯ ಸಾಮ್ರಾಟ್ ಎಂದೇ ಆ ಪಕ್ಷದ ಕಾರ್ಯಕರ್ತರು ಕರೆಯುತ್ತಾರೆ. ಹೀಗಿರುವಾಗ ಪಕ್ಷದ ರಾಜ್ಯ ಘಟಕ ಜಾತಿ ನಮೂದಿಸಿರುವ ಪಟ್ಟಿ ಪ್ರಕಟಿಸಿರುವುದು ವಿಶೇಷವಾಗಿದೆ.
ಕೊಡವರ ಆಕ್ರೋಶ , ಬಿಜೆಪಿ ಮುಕ್ತ ಕೊಡವನಾಡುಗೆ ಕರೆ
ನೂತನ ಪಟ್ಟಿಯಲ್ಲಿ ಕೊಡವರಿಗೆ ಪ್ರಾತಿನಿಧ್ಯ ಇಲ್ಲದೇ ಇರುವುದು ಅವರನ್ನು ಕೆರಳಿಸಿದೆ. ದೇಶದ ಪ್ರಪ್ರಥಮ ' ಕಾಂಗ್ರೆಸ್ ಮುಕ್ತ ಜಿಲ್ಲೆ ' ಕೊಡಗು ಎಂದು ಬಿಜೆಪಿ ಭಾರೀ ಪ್ರಚಾರ ಮಾಡಿತ್ತು. ಇಲ್ಲಿ ಸಂಸದರು, ಶಾಸಕರು , ಸ್ಥಳೀಯ ಸಂಸ್ಥೆಗಳು ಬಿಜೆಪಿ ಕೈಯಲ್ಲಿವೆ. ಆದರೂ ಇಲ್ಲಿಗೆ ಪ್ರಾತಿನಿಧ್ಯ ನೀಡಿಲ್ಲ. ಹೀಗೆ ಆದರೆ ಬಿಜೆಪಿ ಮುಕ್ತ ಕೊಡವನಾಡು ಮಾಡಲು ಹೊರಡಬೇಕಾಗುತ್ತದೆ ಎಂದು ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.