×
Ad

ಪ್ರತಿಭೆಯನ್ನು ಪರಿಶ್ರಮದ ಮೂಲಕ ಅನಾವರಣಗೊಳಿಸಿ

Update: 2016-05-26 21:50 IST

ಮಡಿಕೇರಿ, ಮೇ 26: ಕೊಡಗು ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ ಒಂದು ತಿಂಗಳ ಸ್ಕೇಟಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಗರದಲ್ಲಿ ನಡೆಯಿತು.

ಶಿಬಿರದ ಕೋಚ್ ಜಗದೀಪ್ ಮಾತನಾಡಿ, ಮಕ್ಕಳು ತಮ್ಮಲ್ಲಿರುವ ಪ್ರತಿಭೆೆಯನ್ನು ಪರಿಶ್ರಮದ ಮೂಲಕ ಅನಾವರಣಗೊಳಿಸಿದಾಗ ಮಾತ್ರ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ನಿರಂತರ ಅಭ್ಯಾಸದಿಂದ ಉತ್ತಮ ಕ್ರೀಡಾಪಟುಗಳಾಗಬಹುದೆಂದು ಅವರು ಹೇಳಿದರು.

ಸ್ಕೇಟಿಂಗ್ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದ ಶಿಬಿರಾರ್ಥಿಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರಾರ್ಥಿ ಏಂಜಲ್ ಮುತ್ತಮ್ಮ ಮಾತನಾಡಿ, ಕಳೆದ 6 ವರ್ಷಗಳಿಂದ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ತರಬೇತಿ ಪಡೆಯುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಿಬಿರಾರ್ಥಿ ವಿನಯ್ ಮಾತನಾಡಿದರು. ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಬಳಿಯಿರುವ ಸ್ಕೇಟಿಂಗ್ ಟ್ರಾಕ್‌ನಲ್ಲಿ 16ನೆ ವರ್ಷದ ಬೇಸಿಗೆ ಶಿಬಿರದಲ್ಲಿ ಜಿಲ್ಲೆಯ 55ಕ್ಕೂ ಹೆಚ್ಚು ಸ್ಕೇಟಿಂಗ್ ಪಟುಗಳು ತರಬೇತಿ ಪಡೆದರು.

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಜಿಪಂ ಅಧ್ಯಕ್ಷ ಹರೀಶ್ ಶಿಬಿರಾರ್ಥಿಗಳಿಗೆ ಅರ್ಹತಾ ಪ್ರಮಾಣ ಪತ್ರ ವಿತರಿಸಿದರು. ಸಮಾರಂಭಕ್ಕೂ ಮೊದಲು ಶಿಬಿರಾರ್ಥಿಗಳಿಂದ ನಡೆದ ಸ್ಕೇಟಿಂಗ್ ಪ್ರದರ್ಶನ ಗಮನ ಸೆಳೆಯಿತು.

ಸಮಾರಂಭದಲ್ಲಿ ನಗರಸಭೆಯ ಮಾಜಿ ಸದಸ್ಯ ಸುನೀಲ್ ನಂಜಪ್ಪ, ಪ್ರಮುಖರಾದ ಲಕ್ಷ್ಮೀಸಿಂಗ್, ತಿಮ್ಮಯ್ಯ, ಪೊನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News